ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮುಸಲ್ಮಾನರ ಹಿತಕ್ಕಾಗಿ ಸಂವಿಧಾನಕ್ಕೆ ವಿರುದ್ಧವಾಗಿ ಮೀಸಲಾತಿ ನೀಡಿದ್ದಾಯ್ತು. ಈಗ ಮುಸಲ್ಮಾನರ ಏಳಿಗೆಗಾಗಿ ಸಂವಿಧಾನವನ್ನೆ ಬದಲಾಯಿಸುತ್ತೇವೆ ಎನ್ನುತ್ತಿದ್ದಾರೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಎಂದು ಬಿಜೆಪಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಈ ಬಗ್ಗೆ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ನಾನು ಎಲ್ಲಿಯೂ ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುವ ಹೇಳಿಕೆ ಕೊಟ್ಟಿಲ್ಲ. ನ್ಯಾಯಾಲಯಗಳ ತೀರ್ಪಿನ ಅನುಸಾರ ತಿದ್ದುಪಡಿ ತಂದಿರುವ ನಿದರ್ಶನವಿದೆ ಎಂದು ಹೇಳಿದ್ದೇನೆ. ನನ್ನ ಹೇಳಿಕೆಯನ್ನು ಬಿಜೆಪಿ ಸುಖಾಸುಮ್ಮನೆ ತಿರುಚಿ ಅಪಪ್ರಚಾರ ಮಾಡುತ್ತಿದೆ ಎಂದಿದ್ದಾರೆ.
36 ವರ್ಷಗಳಿಂದ ವಿಧಾನಸಭೆಯಲ್ಲಿದ್ದೇನೆ. ನನಗೂ ಸಮಾನ್ಯ ಜ್ಞಾನವಿದೆ. ಜೆ.ಪಿ ನಡ್ಡಾಗಿಂತ ನಾನು ಸೂಕ್ಷ್ಮತೆ ಇರುವ ರಾಜಕಾರಣಿ. ನಮ್ಮದು ರಾಷ್ಟ್ರೀಯ ಪಕ್ಷ. ಸಂವಿಧಾನ ಜಾರಿಗೆ ತಂದ ಪಕ್ಷ. ಸಂವಿಧಾನದ ಬಗ್ಗೆ ಬೇರೆಯವರಿಗಿಂತ ನಮಗೆ ಚೆನ್ನಾಗಿ ಗೊತ್ತಿದೆ. ನನ್ನ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಮಾಡುತ್ತಿರುವ ಪಿತೂರಿ. ಸುಳ್ಳು ಹೇಳಿ ಅಪಪ್ರಚಾರ ಮಾಡುತ್ತಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಅಂತಾ ಹೇಳಿದ್ದಾರೆ.