ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜಕೀಯ ನಾಯಕರನ್ನು ಮಟ್ಟ ಹಾಕಲು ಹನಿಟ್ರ್ಯಾಪ್ ತಂತ್ರ ರೂಪಿಸಲಾಗುತ್ತಿದೆ ಎನ್ನುವ ಮಾತುಗಳು ಸದನದಲ್ಲಿಯೇ ಕೇಳಿ ಬಂದಿವೆ. ಸಚಿವ ಕೆ.ಎನ್ ರಾಜಣ್ಣ, ವಿಪಕ್ಷ ನಾಯಕ ಆರ್.ಅಶೋಕ್, ಶಾಸಕರಾದ ಆರಗ ಜ್ಞಾನೇಂದ್ರ, ವಿ.ಸುನೀಲ್ ಕುಮಾರ್ ಅವರು ಸದನದಲ್ಲಿ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಎನ್ ರಾಜಣ್ಣ ದೂರು ಕೊಟ್ಟರೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು. ಇದರಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಹನಿ ಟ್ರ್ಯಾಪ್ ಯಾರೂ ಮಾಡಿಸಿದರೂ ತಪ್ಪೇ. ರಾಜಣ್ಣ ಯಾರ ಹೆಸರನ್ನೂ ಹೇಳಿಲ್ಲ. ಹೇಳಿದ್ದರೆ ಕ್ರಮ ತೆಗೆದುಕೊಳ್ಳಬಹುದಿತ್ತು. ಈಗಾಗ್ಲೇ ಈ ಬಗ್ಗೆ ಗೃಹ ಸಚಿವರು ಉತ್ತರಿಸಿದ್ದಾರೆ. ಅವರು ಹೇಳಿದ ಮೇಲೆ ಪುನಃ ನಾನು ಪ್ರಸ್ತಾಪಿಸುವುದು ಸರಿಯಲ್ಲ ಎಂದು ಸಿಎಂ ಹೇಳಿದ್ದಾರೆ. ಮುಖ್ಯಮಂತ್ರಿಗಳು ಸದನದಲ್ಲಿ ಇದಕ್ಕೆ ಉತ್ತರಿಸಿ ಸದನದ ಮೌಲ್ಯ ಎತ್ತಿ ಹಿಡಿಯಬೇಕು ಎಂದು ವಿಪಕ್ಷಗಳ ಸದಸ್ಯರು ಒತ್ತಾಯಿಸುತ್ತಿದ್ದಾರೆ.