ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಭಾಷಣಗಳಲ್ಲಿ ರೈತರು ಈ ದೇಶದ ಬೆನ್ನೆಲುಬು ಎನ್ನುವ ನಮ್ಮ ರಾಜಕಾರಣಿಗಳು, ಆತ ಬೆಳೆದ ಬೆಳೆಗೆ ಸರಿಯಾದ ಬೆಲೆ ಕೊಡಲು ಹಿಂದುಮುಂದು ನೋಡುತ್ತಾರೆ. ಅವರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಾರೆ. ಸಿಂದಗಿ ತಾಲೂಕು ಸೇರಿ ವಿಜಯಪುರ ಜಿಲ್ಲೆಯಲ್ಲಿ 10 ಸಕ್ಕರೆ ಕಾರ್ಖಾನೆಗಳು ಸರ್ಕಾರ ನಿಗದಿ ಮಾಡುವ ದರ ನೀಡುವ ಬಗ್ಗೆ ಘೋಷಣೆ ಮಾಡಿಲ್ಲ. ಇವರ ನಡೆ ಮುಂದುವರೆದರೆ ಯರಗಲ್ ಹತ್ತಿರದ ರಾಷ್ಟ್ರೀಯ ಹೆದ್ದಾರಿಯನ್ನು ಗುರುವಾರದಿಂದ ಬಂದ್ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ, ವಕೀಲ ದಾನಪ್ಪಗೌಡ ಚನ್ನಗೊಂಡ ಹೇಳಿದ್ದಾರೆ.
ಪಟ್ಟಣದ ತಾಲೂಕು ಆಡಳಿತ ಕಚೇರಿ ಆವರಣದಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಬೇರೆ ಜಿಲ್ಲೆಯಂತೆ ನಮ್ಮಲ್ಲಿ ಇಳುವರಿ ಬರುವುದಿಲ್ಲ ಎಂದು ಹೇಳುತ್ತಾರೆ. ಕಬ್ಬಿನ ಇಳುವರಿ ತಗೆಯಿರಿ, ಸ್ವಾಟಿ ಇಳುವರಿಯಲ್ಲ. ಸಿಂದಗಿಯ ಮೂರು ಕಾರ್ಖಾನೆಗಳ ಎಂಡಿಯವರೊಂದಿಗೆ ತಹಶೀಲ್ದಾರ್ ಮಾತನಾಡಿ ಟನ್ ಗೆ 3,300 ರೂಪಾಯಿ ದರ ಘೋಷಣೆ ಮಾಡಿಸಿ ಕಾರ್ಖಾನೆ ಪ್ರಾರಂಭಿಸಬೇಕು. ಇಲ್ಲದೆ ಹೋದರೆ ಮುಂದೆ ನಡೆಯುವ ಹೋರಾಟಗಳಿಗೆ ತಾಲೂಕು ಆಡಳಿತ, ಜಿಲ್ಲಾಡಳಿತ ಹೊಣೆ ಎಂದರು.
ಜಿಲ್ಲಾಧ್ಯಕ್ಷ ಚಂದ್ರಗೌಡ ಪಾಟೀಲ ಮಾತನಾಡಿ, ಸರ್ಕಾರ 3,300 ರೂಪಾಯಿ ಕೊಡಬೇಕು ಎಂದು ಘೋಷಣೆ ಮಾಡಿ ಎರಡು ದಿನವಾಗಿದೆ. ನಮ್ಮ ತಾಲೂಕಿನ ವ್ಯಾಪ್ತಿಗೆ ಬರುವ ಮನ್ನಾಪುರ, ಕೆಪಿಆರ್, ಮಲಘಾಣ ಕಾರ್ಖಾನೆ ಇರಬಹುದು, ಇವರ ಮಾಲೀಕ ಕಿವಿ ಹಿಂಡುವ ಕೆಲಸವನ್ನು ತಾಲೂಕಾ ದಂಡಾಧಿಕಾರಿಗಳು ಮಾಡಬೇಕು. 14, 15 ತಿಂಗಳ ಕಬ್ಬ ಇದೆ. 8, 9 ಇಳುವರಿ ಬರುತ್ತದೆ ಎಂದು ಹೇಗೆ, ಇದಕ್ಕೆ ಯಾರು ಹೊಣೆ. ಸರ್ಕಾರ ಏನು ದರ ನಿಗದಿ ಮಾಡಿದೆ ಅದನ್ನು ಘೋಷಣೆ ಮಾಡಿದರೆ ಹೋರಾಟ ಕೈ ಬಿಡುತ್ತೇವೆ. ಇಲ್ಲದಿದ್ದರೆ ಹೆದ್ದಾರಿ ಬಂದ್ ಮಾಡುತ್ತೇವೆ ಅಂತಾ ಹೇಳಿದರು.
ಈ ವೇಳೆ ಹಲವು ರೈತ ಮುಖಂಡರು ಮಾತನಾಡಿದರು. ಸಲೀಂ ಮುಲ್ಲಾ, ಭೀಮರಾಯ ಮನಗೂಳಿ, ರಾಜು ಕಲಕೇರಿ, ಪ್ರಭು ಕಜುಂಗಿ, ಶ್ರೀಶೈಲ ಜಾಲವಾದಿ, ಶೀವಲಿಂಗಪ್ಪ ಡಂಬಳ, ಸಾಹೇಬಗೌಡ ಸನಮಾನ್ಯ, ಶ್ರೀಮಂತ ರೂಡಗಿ, ರಾಜು ಜಾಲವಾದಿ, ದತ್ತು ಗುಮಾಸ್ತಿ, ಪ್ರಭು ಗುಮಾಸ್ತಿ, ಪೀರಪ್ಪ ಕಜುಂಗಿ, ಭೀಮಾಶಂಕರ ಹಿರೇಮಠ, ರವಿಕುಮಾರ ಮೂಲಿಮನಿ, ಬಸವರಾಜ ಚಾವರ ಸೇರಿದಂತೆ ವಿವಿಧ ಗ್ರಾಮಗಳು ಅನೇಕ ರೈತರು ಭಾಗವಹಿಸಿದ್ದರು.




