ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಭಾಷೆಯ ವಿಚಾರಕ್ಕೆ ಸಂಬಂಧಿಸಿದಂತೆ ಕೆಎಸ್ಆರ್ ಟಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಪ್ರಕರಣ ಸಂಬಂಧ, ಸೋಮವಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಆಸ್ಪತ್ರೆಗೆ ಭೇಟಿ ನೀಡಿದರು. ಇಲ್ಲಿನ ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಿ ಚಿಕಿತ್ಸೆ ಪಡೆಯುತ್ತಿರುವ ಮಹಾದೇವಪ್ಪ ಹುಕ್ಕೇರಿ ಎಂಬುವರ ಆರೋಗ್ಯ ವಿಚಾರಿಸಿದರು. ಈ ವೇಳೆ ಸಚಿವರ ಮುಂದೆ ಕಂಡಕ್ಟರ್ ನಡೆದ ಘಟನೆ ಹೇಳಿದ್ದು, ತಮ್ಮ ವಿರುದ್ಧ ಕೇಸ್ ಮಾಡಿದ್ದಕ್ಕೆ ಭಯವಾಗಿದೆ ಎಂದರು.
ಕರ್ನಾಟಕದಲ್ಲಿ 1 ಲಕ್ಷ 72 ಸಾವಿರ ಟ್ರಿಪ್ಸ್ ಇರುತ್ತವೆ. 65 ವರ್ಷಗಳಲ್ಲಿ ಈ ರೀತಿಯ ಕೇಸ್ ಆಗಿಲ್ಲ. ಉದ್ದೇಶಪೂರ್ವಕವಾಗಿ ದೂರು ಕೊಟ್ಟಿದ್ದಾರೆ. ನಾನು ಗೃಹ ಸಚಿವರ ಜೊತೆ ಮಾತನಾಡುತ್ತೇನೆ ಎಂದು ಸಾರಿಗೆ ಸಚಿವರು ಭರವಸೆ ನೀಡಿದರು. ಶಿವಸೇನೆ ಇಂತವರಿಗೆ ಬೆಂಬಲ ನೀಡಬಾರದು. ನಮ್ಮ ನಾಡಿನ ನೆಲ, ಜಲ ಭಾಷೆ ವಿರುದ್ಧ ಅನವಶ್ಯಕವಾಗಿ ಈ ರೀತಿ ಪುಂಡಾಟಿಕೆ ಮಾಡಿದರೆ ಗಡಿಪಾರು ಮಾಡಲು ಗೃಹ ಸಚಿವರಿಗೆ ಮನವಿ ಮಾಡಲಾಗುವುದು ಎಂದರು. ಈ ಪ್ರಕರಣ ಸಂಬಂಧ ಈಗಾಗ್ಲೇ ನಾಲ್ವರನ್ನು ಬಂಧಿಸಲಾಗಿದೆ. ಬಸ್ ಕಂಡಕ್ಟರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.