ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ವಿದ್ಯಾರ್ಥಿಗಳು ಯಾವುದನ್ನು ಸುಲಭವಾಗಿ ಒಪ್ಪದೇ ವಿವೇಚನಾ ಶಕ್ತಿಯನ್ನು ಬಳಸಿಕೊಂಡು ವಿಷಯವನ್ನು ಅರ್ಥಮಾಡಿಕೊಳ್ಳುವ ಆತ್ಮವಿಶ್ವಾಸ ಇದ್ದರೆ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ವಿಶ್ರಾಂತ ಉಪನಿರ್ದೇಶಕ ಎಸ್.ವಾಯ್ ಹಳಿಂಗಳಿ ಹೇಳಿದರು. ಶನಿವಾರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾ ತಳವಾರ(Talawar) ಸಮಾಜ ಹಾಗೂ ಜ್ಞಾನ ಗಂಗಾ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ನಡೆದ 6ನೇ ವರ್ಷದ ಪ್ರತಿಭಾ ಪುರಸ್ಕಾರ ನಿಮಿತ್ತ ಎಸ್ಎಸ್ಎಲ್.ಸಿ(SSLC) ಹಾಗೂ ದ್ವಿತೀಯ ಪಿಯುಸಿ(PUC) ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸೇವಾ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮನಸ್ಸಿದ್ದರೆ ಮಾರ್ಗ ಎಂಬಂತೆ ಯಾವುದೇ ಗುರಿ ಸಾಧಿಸುವ ಛಲ ಹೊಂದಿರಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಂತಹದೇ ಕಠಿಣ ಸವಾಲು ಎದುರಾದರೂ ಅದನ್ನು ಬಗೆಹರಿಸುವ ಮನೋಭಾವ ತುಂಬಿರಬೇಕು. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ, ಹಿರಿಯರಿಗೆ ಗೌರವಿಸುವುದನ್ನು ಪ್ರಾಥಮಿಕ ಹಂತದಿಂದಲೇ ಕಲಿಸುವುದು ಸೂಕ್ತ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜ್ಞಾನ ಗಂಗಾ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ಮಹಾದೇವ ಲಗಮಣ್ಣಾ ಸೊನ್ನ ಮಾತನಾಡಿ, ಜ್ಞಾನಗಂಗಾ ವಿವಿಧೋದ್ದೇಶ ಸಹಕಾರ ಸಣ್ಣ ಪ್ರಮಾಣದ ಹಣಕಾಸಿನ ಸಂಸ್ಥೆಯಾಗಿದ್ದು, ಸಂಘದ ಸದಸ್ಯರೆಲ್ಲರೂ ಸೇರಿ ಒಮ್ಮತದಿಂದ ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಸಮಾಜದ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸುತ್ತಿರುವುದು ಒಳ್ಳೆಯ ಕಾರ್ಯವಾಗಿದೆ. ವಿದ್ಯಾರ್ಥಿಗಳು ಪ್ರೇರೆಪಿತರಾಗಿಲಿ ಎಂಬ ಉದ್ದೇಶದಿಂದ 6 ವರ್ಷದಿಂದ ವಿದ್ಯಾರ್ಥಿಗಳನ್ನು ಪ್ರೋತ್ಸಾಯಿಸುತ್ತಾ ಬಂದಿದೆ ಎಂದರು.
ಇನ್ನೋರ್ವ ಅತಿಥಿ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾದ ರಾಜಶೇಖರ ಕೋಲ್ಹಾರ ಮಾತನಾಡಿ, ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣ ಮಾಡುವ ಧಾವಂತದಲ್ಲಿ ಅವರನ್ನು ತಂದೆ ತಾಯಿಯ ಪ್ರೀತಿಯಿಂದ ವಂಚಿಸುತ್ತಿದ್ದೇವೆ. ಹಾಗಾಗದೇ ಎಚ್ಚರಿಕೆಯಿಂದ ಅವರಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಭಾಂಧವ್ಯ ವೃದ್ಧಿಯಾಗುವಂತೆ ನೋಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜ್ಞಾನಗಂಗಾ ವಿವಿಧೋದ್ದೇಶ ಅಧ್ಯಕ್ಷರಾದ ಡಾ.ಅಶೋಕ ಸಾಸನೂರ, ಸಮಾಜದ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರ ಏರ್ಪಡಿಸಿ ಅವರ ಮನೋಬಲ ಹೆಚ್ಚಿಸಲು ಒಂದು ವೇದಿಕೆಯಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ್ಎಸ್ಎಲ್.ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ನಿವೃತ್ತ ನೌಕರರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಿದ್ದಣ್ಣ ಓತಿಹಾಳ, ರಾಜೇಂದ್ರ ಕೊಂಡಗೂಳಿ, ಎಸ್.ಎಸ್.ಕರಕಲಮನಿ, ಕೆ.ಪಿ.ಮನಗೂಳಿ, ಸುಭಾಸ ನಂದಿಹಾಳ, ಆರ್.ಎಂ.ಯಲಗೋಡ, ಐ.ಬಿ.ಚೌಧರಿ, ಎಸ್.ಸಿ.ಕಮತಗಿ, ಆರ್.ಎಸ್.ವಾಲಿಕಾರ, ಲಕ್ಷ್ಮಣ ಜಾಯವಾಡಗಿ, ಆನಂದ ವಿ.ಬಂದರವಾಡ, ಪರಶುರಾಮ ಭೀ.ವಾಲಿಕಾರ, ಶಿವರಾಜ ಗೋಪಾಲ.ಮನಗೂಳಿ, ಶಿವಾನಂದ ಅಂಬಿಗೇರ, ರವಿ ಮೈಲಿಕರ, ಎಸ್.ಎಸ್.ಗಾರ, ಎಸ್.ಎ.ಅಹಿರಸಂಗ, ವಸಂತ ನಾಯಕ, ರಂಗನಾಥ ಅಕ್ಕಲಕೋಟಿ, ಎಸ್.ಎಸ್.ಗಾಣುರ, ಭರತ್ ಕೋಳಿ ಸೇರಿ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಕಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್.ಜಿ. ತೊನಶ್ಯಾಳ, ರಾಜು ಇಟ್ಟಂಗಿಹಾಳ, ಮಹಾಂತಪ್ಪ ಸಂಗಪ್ಪ ವಾಲಿಕಾರ, ಶಿಕ್ಷಣ ಕ್ಷೇತ್ರದ ವಿಶೇಷ ಸಾಧಕರಾದ ತಾಳಿಕೋಟೆಯ ಗುರುಮಾತೆಯರಾದ ಲಲಿತಾಬಾಯಿ ಪರಸಪ್ಪ ಅಂಬಿಗೇರ ಇವರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಹನುಮಂತ ಬೂದಿಹಾಳ ದಂಪತಿ ನಿರೂಪಿಸಿದರು. ದತ್ತಾತ್ರೇಯ ಹಿಪ್ಪರಗಿ ಮತ್ತು ಮಂಜುಳಾ ಹಿಪ್ಪರಗಿ ಸಂಗೀತ ಕಾರ್ಯಕ್ರಮ ನೀಡಿದರು.