ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಹಲವು ಶಾಸಕರನ್ನು ಕೂಡಿಕೊಂಡು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಔತಣಕೂಟ ನಡೆಸಿದ್ದಾರೆ. ಈ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ. ಇದಕ್ಕೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಅವರು, ಪ್ರತಿ ದಿನ ಒಬ್ಬೊಬ್ಬರು ಪ್ರೀತಿಯಿಂದ ಊಟಕ್ಕೆ ಕರೆಯುತ್ತಿದ್ದಾರೆ. ಊಟ ತಂದು ಕೊಡುತ್ತಿದ್ದಾರೆ. ಇದನ್ನು ಬೇಡ ಅನ್ನಲು ಆಗುತ್ತದೆಯೇ? ಇದ್ಯಾವ ಔತಣಕೂಟವೂ ಅಲ್ಲ ಏನೂ ಅಲ್ಲ ಅಂತಾ ಹೇಳಿದರು.
ಸರ್ಕಿಟ್ ಹೌಸ್ ಹತ್ತಿರ ಶುಕ್ರವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಕ್ಷೇತ್ರದ ಹುಡುಗನೊಬ್ಬ ಇಲ್ಲಿ ಕೆಲಸ ಮಾಡುತ್ತಿದ್ದಾನೆ. ಇವತ್ತು ಮನೆಯಿಂದ ಮುದ್ದೆ, ಉಪ್ಸಾರು ಊಟ ಕಳಿಸುತ್ತೇನೆ ಅಂತಿದ್ದಾನೆ, ನಾಳೆ ನಮ್ಮ ಆಸೀಫ್ ಸೇಠ್, ಫಿರೋಜ್ ಸೇಠ್ ಊಟಕ್ಕೆ ಕರೆದಿದ್ದಾರೆ. ಬೆಳಗಾವಿಯ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರು, ನನ್ನ ಆತ್ಮೀಯರಾದ ದೊಡ್ಡಣ್ಣನವರ ಕಳೆದ 15 ವರ್ಷಗಳಿಂದ ಊಟಕ್ಕೆ ಬನ್ನಿ ಎಂದು ಕರೆಯುತ್ತಿದ್ದರು. ನಾನು ಹಾಗೂ ಒಂದಿಷ್ಟು ಜನ ಹೋಗಿದ್ದವು. ಅದು ಔತಣಕೂಟ ಅಲ್ಲ ಏನೂ ಇಲ್ಲ ಅಂತಾ ಹೇಳಿದರು.




