ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಸರ್ಕಾರಿ ಜಾಗೆಯ ಕಟ್ಟಡದ ಪುನರ್ ರಚನೆ ಪರವಾನಿಗೆ ಪತ್ರ ನೀಡಲು 15 ಸಾವಿರ ರೂಪಾಯಿ ಲಂಚದ ಹಣ ಬೇಡಿಕೆ ಇಟ್ಟು ಲೋಕಾಯುಕ್ತ ಪೊಲೀಸ್‌ರಿಗೆ ಸಿಕ್ಕಿಬಿದ್ದ ಮುದ್ದೇಬಿಹಾಳ ತಾಲೂಕಿನ ತುಂಬಗಿ ಗ್ರಾಮ ಪಂಚಾಯತಿಯ ಬಿಲ್ ಕಲೆಕ್ಟರ್ ಮಡಿವಾಳಯ್ಯ ಅಯ್ಯಣ್ಣಾ ಸಗರಮಠ ಆಪಾದಿತನನ್ನು ವಿಜಯಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಹಾಗೂ 40 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ನೀಡಿದೆ.
ಮುದ್ದೇಬಿಹಾಳ ತಾಲೂಕಿನ ಫತ್ತೆಪುರ ಗ್ರಾಮದ ದಾವಲಸಾಬ ಸಗರ ಎಂಬುವರು ಫೆಬ್ರವರಿ 8, 2017ರಂದು ವಿಜಯಪುರ ಎಸಿಬಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ, ತನ್ನ ಪತ್ನಿಯ ಹೆಸರಿನಲ್ಲಿರುವ ಸರ್ಕಾರಿ ಜಾಗೆಯ ಕಟ್ಟಡ ಪರವಾನಿಗೆ ಪತ್ರ ಮಾಡಿಸಿ ಕೊಡಲು 15 ಸಾವಿರ ರೂಪಾಯಿ ಬೇಡಿಕೆ ಇಟ್ಟಿರುವ ಕುರಿತು ದೂರು ಸಲ್ಲಿಸಿದ್ದರು. ಈ ದೂರಿಯನ್ವಯ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಲಂಚದ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಆಪಾದಿತ ಬಿಲ್ ಕಲೆಕ್ಟರ್ ಮಡಿವಾಳಯ್ಯ ಅಯ್ಯಣ್ಣಾ ಸಗರಮಠನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. ಈ ಪ್ರಕರಣ ಕುರಿತು ವಿಚಾರಣೆ ನಡೆಸಿದ ವಿಜಯಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ. ಸರ್ಕಾರದ ಪರವಾಗಿ ಕರ್ನಾಟಕ ಲೋಕಾಯುಕ್ತ ಎಸ್‌ಪಿಪಿ ಅರ್ಜುನ ಮಿಸಾಳೆ ಅವರು ವಾದ ಮಂಡಿಸಿದ್ದಾರೆ ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.