ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಎಲ್ಲ ಜೀವಿಗಳಿಗಿಂತ ಮನುಷ್ಯ ಬುದ್ದಿಜೀವಿ. ತನಗೆ ಏನು ಬೇಕು ಅದನ್ನು ಸಾಧಿಸುವ ಬುದ್ದಿ ಶಕ್ತಿಯನ್ನು ಹೊಂದಿದ್ದಾನೆ. ಇಂತಹ ಮನುಷ್ಯ ಜೀವನದಲ್ಲಿ ಹಲವು ಹಂತಗಳನ್ನು ದಾಟುತ್ತಾನೆ. ಹೀಗೆ ದಾಟುವ ಹಂತದಲ್ಲಿ ಶಿಕ್ಷಣಕ್ಕಾಗಿ 15 ರಿಂದ 17 ವರ್ಷಗಳನ್ನು ಮೀಸಲಿಡುತ್ತಾನೆ ಎಂದು ಪಟ್ಟಣದ ಆರ್.ಡಿ ಪಾಟೀಲ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪಿ.ವಿ ಮಹಲಿನಮಠ ಹೇಳಿದರು. ಸೋಮವಾರ ಸಂಜೆ ನಡೆದ ಸಮತಾ ಸಂಸ್ಥೆಯ ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಬ್ರಹ್ಮನಿಂದ ಸೃಷ್ಟಿಯಾದ ಮನುಷ್ಯ, ಕತ್ತೆ, ನಾಯಿ, ಗೂಬೆಯ ವೃತ್ತಾಂತದ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಬದುಕಿನ ಮೌಲ್ಯದ ಕುರಿತು ತಿಳಿಸಿಕೊಟ್ಟರು. ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿತರೆ ಮಕ್ಕಳು ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುವುದು ನಿಲ್ಲುತ್ತೆ ಎನ್ನುವ ಕಿವಿಮಾತು ಹೇಳಿದರು.
ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿ ನಿರ್ದೇಶಕರಾದ ವಿ.ಬಿ ಕುರುಡೆ ಅವರು ಸಸಿಗೆ ನೀರೂಣಿಸುವ ಮೂಲಕ ಹಾಗೂ ಸರಸ್ವತಿ ಫೋಟೋ ಪೂಜೆ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಾಲಕರ ಪ್ರತಿನಿಧಿಯಾಗಿ ಭಾಗವಹಿಸಿ ಮಾತನಾಡಿದ ಪತ್ರಕರ್ತ ನಾಗೇಶ ತಳವಾರ, ವಿದ್ಯಾರ್ಥಿಗಳ ಉತ್ತಮ ಭವಿಷ್ಯದ ದೃಷ್ಟಿಯಿಂದ ವಿದ್ಯಾಚೇತನ ಶಾಲೆ ನಿರಂತರವಾಗಿ ಶ್ರಮಿಸುತ್ತಿದೆ. ಶಿಕ್ಷಣದ ಜೊತೆಗೆ ಹಲವು ಮೌಲ್ಯಯುತ ಕಾರ್ಯಕ್ರಮಗಳನ್ನು ಸದಾ ಆಯೋಜಿಸುತ್ತಾ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ಸಹ ನೀಡುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಮಕ್ಕಳನ್ನು ತಯಾರು ಮಾಡುವ ಹಂತದಲ್ಲಿ ಈ ಶಾಲೆಯ ಶಿಕ್ಷಕರು ಹಗಲಿರುಳು ಶ್ರಮಿಸಿದ್ದಾರೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಒತ್ತು ಕೊಡುತ್ತಿದ್ದಾರೆ ಎಂದರು.

ಇನ್ನೋರ್ವ ಪಾಲಕ ಪ್ರತಿನಿಧಿ ರಮೇಶ ಜಿ.ಬಮ್ಮಣ್ಣಿ ಉಪಸ್ಥಿತರಿದ್ದರು. ಸಮತಾ ಸಂಸ್ಥೆಯ ಅಧ್ಯಕ್ಷರಾದ ಕುಸಮಾ ಯಾಳಗಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಸಂಜನಾ ಭಾವಿಮನಿ ವಿದ್ಯಾರ್ಥಿ ಪ್ರತಿನಿಧಿಯಾಗಿ ವೇದಿಕೆ ಮೇಲಿದ್ದರು. ಮಕ್ಕಳು ಮುದ್ದು ಮುದ್ದಾಗಿ ನೃತ್ಯ ಮಾಡುವ ಮೂಲಕ ಕಾರ್ಯಕ್ರಮದ ಮೆರಗು ಹೆಚ್ಚಿಸಿದರು. ಶಿಕ್ಷಕಿ ಸಕ್ಕುಬಾಯಿ ಡಾಂಗಿ ವಾರ್ಷಿಕ ವರದಿ ವಾಚನ ಮಾಡಿದರು. ಶಕ್ಷಕಿಯಾರದ ದೀಕ್ಷಾ ಕನ್ನೊಳ್ಳಿ ಸ್ವಾಗತಿಸಿದರು. ರೂಪಾ ಸೂರಪ್ಪಗೌಡ, ಪ್ರಗತಿ ಹಿರೇಮಠ ನಿರೂಪಿಸಿದರು. ರಾಧಿಕಾ ಹಿರೇಮಠ ವಂದಿಸಿದರು. ಶಿಕ್ಷಕರಾದ ರಮೇಶ ಯಾಳಗಿ, ಸಂಜೀವಕುಮಾರ ಡಾಂಗಿ, ವಿಕಾಸ ಚೌರ, ಶಿಕ್ಷಕಿ ಸುಮಾ ಬಿರಾದಾರ, ಸಿಬ್ಬಂದಿ ಶಾಂತಾಬಾಯಿ, ನೀಲಮ್ಮ ಹಾಜರಿದ್ದರು.