ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ(Chitradurga): ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನಿಗೆ ಆಪರೇಷನ್ ಮಾಡಬೇಕಾದ ಹಿನ್ನಲೆಯಲ್ಲಿ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಅಕ್ಕ, ಭಾವ ಹತ್ಯೆ ಮಾಡಿದ ದಾರುಣ ಘಟನೆ ನಡೆದಿದೆ. ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೃತದೇಹವನ್ನು ದುಮ್ಮಿ ಗ್ರಾಮಕ್ಕೆ ತೆಗೆದುಕೊಂಡು ಬಂದಿದ್ದಾರೆ. ಮೃತದೇಹದ ಕುತ್ತಿಗೆ ಗಾಯ, ಹಲ್ಲೆಯಂತಹ ಗುರುತು ಕಂಡು ಬಂದಿದೆ. ಇದರಿಂದ ಅನುಮಾನಗೊಂಡ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತ ಯುವಕನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವೇಳೆ ತನಿಖೆ ನಡೆಸಿದ ಪೊಲೀಸರಿಗೆ ಯುವಕನನ್ನ ಸ್ವತಃ ಅಕ್ಕ ಹಾಗೂ ಭಾವನೇ ಕತ್ತು ಹಿಸುಕಿ ಕೊಲೆ ಮಾಡಿರುವುದು ತಿಳಿದು ಬಂದಿದೆ. 23 ವರ್ಷದ ಯುವಕನಿಗೆ ಅಪಘಾತದಲ್ಲಿ ಕಾಲಿಗೆ ಗಂಭೀರವಾದ ಗಾಯವಾಗಿದೆ. ಆಸ್ಪತ್ರೆಗೆ ದಾಖಲಿಸಿದ ವೈದ್ಯರು ತಪಾಸಣೆ ನಡೆಸಿದ್ದಾರೆ. ಈ ವೇಳೆ ಯುವಕನಿಗೆ ಎಚ್ಐವಿ ಸೋಂಕು ಇರುವುದು ಕಂಡು ಬಂದಿದೆ. ಇದನ್ನು ಕುಟುಂಬಸ್ಥರಿಗೆ ಹೇಳಿದ್ದಾರೆ.
ಯುವಕನಿಗೆ ಎಚ್ಐವಿ ಸೋಂಕು ಇರುವುದು ತಿಳಿದ ಕುಟುಂಬಸ್ಥರಿಗೆ ಆಘಾತವಾಗಿದೆ. ಇದರ ನಡುವೆ ಯುವಕನ ಕಾಲಿನ ಆಪರೇಷನ್ ಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲು ಹೇಳಿದ್ದಾರೆ. ಹೀಗಾಗಿ ಆತನನ್ನು ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವಾಗಲೇ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ತಮ್ಮನಿಗೆ ಎಚ್ಐವಿ ಸೋಂಕು ಇರುವುದು ಜನರಿಗೆ ಗೊತ್ತಾಗಿ ಮರ್ಯಾದೆ ಹೋಗುತ್ತದೆ ಎಂದು ಅಕ್ಕ, ಭಾವ ಕೂಡಿಕೊಂಡು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.