ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಒಳಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ.ಪರಮೇಶ್ವರ್ ಮಾತನಾಡಿದ್ದು, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯು ಒಂದು ವಾರದೊಳಗೆ ಮಧ್ಯಂತರ ವರದಿ ಸಲ್ಲಿಸುವುದಾಗಿ ತಿಳಿಸಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಚರ್ಚಿಸಿ ಆದಷ್ಟು ಬೇಗ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು. ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ನೀಡುವ ಸಂಬಂಧ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಈ ರೀತಿ ಹೇಳಿದರು.
ವೈಜ್ಞಾನಿ ದತ್ತಾಂಶ ಒಳಗೊಂಡು ಹಲವು ಅಂಶಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಒಳಮೀಸಲಾತಿ ಜಾರಿಗೆ ತರಬೇಕು ಅನ್ನೋದು ನಮ್ಮ ಸರ್ಕಾರದ ಬದ್ಧತೆ. ಚುನಾವಣೆಯ ಪ್ರಣಾಳಿಕೆಯಲ್ಲಿಯೂ ಇದನ್ನು ಹೇಳಿದ್ದೇವೆ. ಸುಪ್ರಿಂ ಕೋರ್ಟ್ ಮಾರ್ಗಸೂಚಿ ಪ್ರಕಾರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಇದು ಮುಗಿಯುವ ತನಕ ಯಾವುದೇ ಮುಂಬಡ್ತಿ, ಬ್ಯಾಕ್ ಲಾಗ್, ನೇಮಕಾತಿ ಮಾಡುವುದಿಲ್ಲ ಎಂದರು. ಈ ವೇಳೆ ಸಚಿವರಾದ ಹೆಚ್.ಸಿ ಮಹಾದೇವಪ್ಪ, ಶಿವರಾಜ ತಂಗಡಗಿ, ಆರ್.ಬಿ ತಿಮ್ಮಾಪುರ, ಕೆ.ಹೆಚ್.ಮುನಿಯಪ್ಪ, ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.