ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಪವಿತ್ರಾಗೌಡ, ಎ2 ನಟ ದರ್ಶನ್ ಸೇರಿದಂತೆ 7 ಆರೋಪಿಗಳಿಗೆ ಶುಕ್ರವಾರ ನಿಯಮಿತ ಜಾಮೀನು ಸಿಕ್ಕಿದೆ. ಇದಕ್ಕೂ ಮೊದಲು ಐವರಿಗೆ ಜಾಮೀನು ಸಿಕ್ಕಿದೆ. ಇನ್ನುಐವರು ಜೈಲಿನಲ್ಲಿದ್ದಾರೆ. ಈ ಜಾಮೀನು ವಿಚಾರದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಕೊಲೆಯಾದ ರೇಣುಕಾಸ್ವಾಮಿ ತಂದೆ, ತಮ್ಮ ಸೊಸೆ ಖಾಯಂ ನೌಕರಿ ಕೊಡಬೇಕು ಎನ್ನುವ ಮಾತುಗಳನ್ನು ಹೇಳುತ್ತಾರೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಈ ವಿಚಾರ ಪ್ರಸ್ತಾಪ ಮಾಡಿದ್ದರು.
ಇಲ್ಲಿ ರೇಣುಕಾಸ್ವಾಮಿ ಹತ್ಯೆ ನಡೆಯಬಾರದಿತ್ತು ಎನ್ನುವುದು ಎಷ್ಟು ಸತ್ಯವೋ, ಅಷ್ಟೇ ಯಾವ ವಿಚಾರದಲ್ಲಿ ಕೊಲೆಯಾದ ಎನ್ನುವುದನ್ನು ನೋಡುವುದಾಗಿದೆ. ಮದುವೆಯಾಗಿದ್ದಾನೆ. ಪತ್ನಿ ಇದ್ದಾಳೆ. ವಯಸ್ಸಾದ ತಂದೆ, ತಾಯಿ ಇದ್ದಾರೆ. ಅವರೊಂದಿಗೆ ನೆಮ್ಮದಿಯಾಗಿ ಜೀವನ ಮಾಡುವುದು ಬಿಟ್ಟು, ಕಂಡವರ ಹೆಣ್ಮಕ್ಕಳಿಗೆ ಕೆಟ್ಟದಾಗಿ ಮೆಸೇಜ್ ಮಾಡುವುದು, ಫೋಟೋ ಕಳಿಸವುದನ್ನು ಮಾಡಿದ. ನಟ ದರ್ಶನ್, ಪವಿತ್ರಾಗೌಡ ಟೀಂ ಈ ಬಗ್ಗೆ ಕಾನೂನು ಮೊರೆ ಹೋಗಿದ್ದರೆ ಆತನಿಗೆ ಏನು ಪಾಠ ಕಲಿಸಬೇಕೋ ಅದನ್ನು ಪೊಲೀಸರು ಕಲಿಸುತ್ತಿದ್ದರು. ಇವರ ಬದುಕಿನಲ್ಲಿ ಇಂತಹದೊಂದು ಕಾರ್ಮೋಡ ಕವಿಯುತ್ತಿರಲಿಲ್ಲ. ಆದರೆ, ಮಗನ ಕೊಲೆಯಾಗಿದೆ. ಸೊಸೆಗೆ ಖಾಯಂ ನೌಕರಿ ಕೊಡಿ ಎನ್ನುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ.
ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಎನ್ನುವ ಯುವತಿಯ ಕೊಲೆ ಆಯ್ತು. ಪ್ರೀತಿಸು ಎಂದು ಬಲವಂತ ಮಾಡಿದ ಕಿರಾತಕನೊಬ್ಬ ಮನೆಗೆ ನುಗ್ಗಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ. ಮೊದಲೇ ಹೆತ್ತವರನ್ನು ಕಳೆದುಕೊಂಡ ಯುವತಿ ದಾರುಣವಾಗಿ ಪ್ರಾಣ ಬಿಟ್ಟಳು. ಈಗ ಸಹೋದರಿ ಅಜ್ಜಿಯ ಜೊತೆಗೆ ಜೀವನ ಮಾಡುತ್ತಿದ್ದಾಳೆ. ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಕುಟುಂಬದ ಅಮಾಯಕ ಜೀವ ಬಲಿಯಾಗಿದೆ. ಇಲ್ಲಿ ಸರ್ಕಾರ ಸಹಾಯ ಮಾಡುವುದರಲ್ಲಿ ಅರ್ಥವಿದೆ. ಈ ದೇಶಕ್ಕಾಗಿ ಗಡಿಯಲ್ಲಿ ಹೋರಾಡಿ ಹುತಾತ್ಮನಾದ ಯೋಧನ ಪತ್ನಿಯಾಗಿದ್ದರೆ ನೌಕರಿ ಕೊಡಿ ಎನ್ನುವುದು ತಪ್ಪಲ್ಲ. ನಾಡು, ನುಡಿ, ಜಲದ ವಿಚಾರದಲ್ಲಿ ಹೋರಾಟ ಮಾಡಿ ಪ್ರಾಣ ಅರ್ಪಿಸಿದ ವ್ಯಕ್ತಿಯಾಗಿದ್ದರೆ ಆತನ ಕುಟುಂಬದಲ್ಲಿ ಒಬ್ಬರಿಗೆ ನೌಕರಿ ಕೊಡಿ ಎಂದು ಕೇಳುವುದು ತಪ್ಪಲ್ಲ. ಆದರೆ, ಇಷ್ಟು ವರ್ಷ ಜೋಪಾನ ಮಾಡಿದ ತಂದೆ ತಾಯಿ ಹಾಗೂ ತನ್ನ ನಂಬಿ ಬಂದಿದ್ದ ಪತ್ನಿ ಬಗ್ಗೆ ವಿಚಾರ ಮಾಡದೆ ಮಾಡಬಾರದ ಕೆಲಸ ಮಾಡಿ ಪ್ರಾಣ ಕಳೆದುಕೊಂಡಿರುವುದಕ್ಕೆ ಸರ್ಕಾರಿ ನೌಕರಿ ಕೊಡಿ ಎಂದು ಕೇಳುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.