ಪ್ರಜಾಸ್ತ್ರ ಕ್ರೀಡಾ ಸುದ್ದಿ
ಟಿ-20 ಏಷ್ಯ ಕಪ್ ಮಹಿಳಾ(Women’s Asia cup) ಟೂರ್ನಿಯಲ್ಲಿ ಭಾರತದ ಪಡೆ ಘರ್ಷಿಸುತ್ತಿದೆ. ಶ್ರೀಲಂಕಾದ ರಂಗಿರಿ ದಮಬುಲ್ಲಾ ಅಂತಾರಾಷ್ಟ್ರೀಯ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಬಳಗ ಭರ್ಜರಿ 10 ವಿಕೆಟ್ ಗಳಿಂದ ಗೆದ್ದು ಬೀಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಬಾಂಗ್ಲಾ ನಾಯಕಿ ನಿಗರ್ ಸುಲ್ತಾನಾ ಲೆಕ್ಕಾಚಾರವನ್ನು ಟೀಂ ಇಂಡಿಯಾ(India Women) ಬೌಲರ್ ಗಳು ಸಂಪೂರ್ಣ ಉಲ್ಟಾ ಮಾಡಿದರು. ಹೀಗಾಗಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 80 ರನ್ ಗಳಿಸಿತು. ನಾಯಕಿ ಸುಲ್ತಾನಾ 32 ರನ್ ಬಿಟ್ಟರೆ ಉಳಿದವರು ಒಂದಂಕಿ ಸಹ ದಾಟಲಿಲ್ಲ.
ಅಲ್ಪ ಗುರಿ ಬೆನ್ನು ಹತ್ತಿದ ಭಾರತ ತಂಡ ಕೇವಲ 11 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 83 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಶೆಫಾಲಿ ವರ್ಮಾ ಅಜೇಯ 26, ಸ್ಫೋಟಕ ಆಟಗಾರ್ತಿ ಸ್ಮೃತಿ ಮಂದಾನಾ ಅಜೇಯ 55 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಭಾರತ ಬೌಲರ್ ಪರ ರೇಣುಕಾ ಸಿಂಗ್, ರಾಧಾ ಯಾದವ್ ತಲಾ 3 ವಿಕೆಟ್ ಪಡೆದು ಮಿಂಚಿದರು. ಪೂಜಾ ವಸ್ತ್ರಕರ್, ದೀಪ್ತಿ ಶರ್ಮಾ ತಲಾ 1 ವಿಕೆಟ್ ಪಡೆದರು. 4 ಓವರ್ ಗಳಲ್ಲಿ 10 ರನ್ ನೀಡಿ 3 ವಿಕೆಟ್ ಪಡೆದ ರೇಣುಕಾ ಸಿಂಗ್(Renuka Singh) ಪ್ಲೇಯರ್ ಆಫ್ ದಿ ಮ್ಯಾಚ್ ಆದರು.