ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಿಲ್ಲೆಯ 11 ಪರೀಕ್ಷಾ ಕೇಂದ್ರಗಳಲ್ಲಿ ನವೆಂಬರ್ 24ರಂದು ಕೆ-ಸೆಟ್ ಪರೀಕ್ಷೆಗಳು ನಡೆಯಲಿದ್ದು, ಈ ಪರೀಕ್ಷೆಗೆ ನಿಯೋಜಿಸಿರುವ ಅಧಿಕಾರಿ, ಸಿಬ್ಬಂದಿ ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸುವ ಮೂಲಕ ವ್ಯವಸ್ಥಿತವಾಗಿ ಹಾಗೂ ಸುಸೂತ್ರವಾಗಿ ಪರೀಕ್ಷೆ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು. ಗುರುವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಉಪನ್ಯಾಸಕರ ಅರ್ಹತಾ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧಕ್ಷತೆ ವಹಿಸಿ ಮಾತನಾಡಿದ ಅವರು, ಒಟ್ಟು 11 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, 6,042 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಪರೀಕ್ಷಾ ಕೊಠಡಿಗಳಿಗೆ ಸಿಸಿ ಕ್ಯಾಮರಾಗಳನ್ನು ಅಳವಡಿಸುವುದು, ಪರೀಕ್ಷಾ ದಿನದಂದು ಪ್ರತಿ ಕೊಠಡಿಗಳಲ್ಲಿ ಛಾಯಾಗ್ರಾಹಕರನ್ನು ನೇಮಿಸಬೇಕು, ಅಭ್ಯರ್ಥಿಗಳು ಮೊಬೈಲ್ ಫೋನ್, ಸ್ಮಾರ್ಟ್ ಫೋನ್, ಬ್ಯಾಗ್ ಹಾಗೂ ಇತರೇ ವಸ್ತುಗಳನ್ನು ಒಳಗಡೆ ತೆಗೆದುಕೊಂಡು ಹೋಗದಂತೆ, ಪರೀಕ್ಷಾ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರು, ಗಾಳಿ, ಬೆಳಕು ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕು. ಯಾವುದೇ ಲೋಪವಾಗದಂತೆ ಕಾರ್ಯ ನಿರ್ವಹಿಸುವುದು. ನಿರ್ಲಕ್ಷ ತೋರಿದಲ್ಲಿ ಕೊಠಡಿ ಮೇಲ್ವಿಚಾರಕರನ್ನು ಹೊಣೆಗಾರರನ್ನಾಗಿಸಲಾಗುವುದು. ಕಡ್ಡಾಯವಾಗಿ ಗುರುತಿನ ಚೀಟಿಗಳನ್ನು ಧರಿಸಿಬೇಕು ಎಂದು ಸೂಚನೆ ನೀಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಮಾತನಾಡಿ, ಪರೀಕ್ಷೆಯನ್ನು ಅತ್ಯಂತ ವ್ಯವಸ್ಥಿತವಾಗಿ ಜರುಗಿಸಲು ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಬಂದೋಬಸ್ತ್ ಕಲ್ಪಿಸಲು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಖಜಾನೆ ಇಲಾಖೆಯ ಉಪ ನಿರ್ದೇಶಕ ಹನಮಂತ ಕಾಲತಿಪ್ಪಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಕೆ. ಹೊಸಮನಿ, ಪ್ರಾಚಾರ್ಯರಾದ ಕೆ.ಎ.ಉಪ್ಪಾರ ಸೇರಿದಂತೆ ಪರೀಕ್ಷೆಗೆ ನಿಯೋಜಿತ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.