ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮ್ಯಾಟ್ರಿಮೋನಿಯಲ್ಲಿ ಇಂದು ಹತ್ತಾರ ವಿಧಗಳಿವೆ. ವಿವಿಧ ಧರ್ಮ, ಜಾತಿಗಳ ಆಧಾರದ ಮೇಲೆ ವಧು, ವರರ ಆನ್ಲೈನ್ ಅಪ್ಲಿಕೇಷನ್ ಗಳಿವೆ. ಇದರಲ್ಲಿ ತಮಗೆ ಇಷ್ಟವಾಗುವ ಜೋಡಿಯನ್ನು ಆಯ್ಕೆ ಮಾಡಿಕೊಂಡು ಮದುವೆಯಾಗಲು ನೋಡುವವರ ಸಂಖ್ಯೆ ಏನೂ ಕಡಿಮೆಯಿಲ್ಲ. ಆದರೆ, ಕೆಲವರು ಇದನ್ನು ಬಂಡವಾಳ ಮಾಡಿಕೊಂಡು ಮೋಸ ಮಾಡುವವರ ಸಂಖ್ಯೆಯೂ ದೊಡ್ಡದಿದೆ. ಕೇಂದ್ರ ಕೈಗಾರಿಕಾ ಭದ್ರತಾ(CISF) ಪಡೆಯ ಮಹಿಳಾ ಕಾನ್ಸ್ ಟೇಬಲ್ ವೊಬ್ಬರು ಮ್ಯಾಟ್ರಿಮೋನಿಯಲ್ಲಿ(Matrimony) ಪರಿಚಯವಾದ ವ್ಯಕ್ತಿಯಿಂದ 18 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ತೆಲಂಗಾಣ ಮೂಲದ ಅಶೋಕ ಮುಸ್ತಿ ಎಂಬಾತನ ಪರಿಚಯವಾಗಿದೆ. ತಾನು ಸರ್ಕಾರಿ ನೌಕರಿಗೆ ತಯಾರಿ ನಡೆಸಿದ್ದೇನೆ ಎಂದು ನಂಬಿಸಿ ಮದುವೆ ಮಾತುಕತೆ ಮುಗಿಸಿದ್ದಾನೆ. ಇದನ್ನು ಹುಡುಗಿ ಹಾಗೂ ಆಕೆಯ ಕಡೆಯವರು ನಂಬಿದ್ದಾರೆ. ಆಗಾಗ ಮನೆಗೆ ಬಂದು ಹೋಗುತ್ತಿದ್ದನಂತೆ. 20 ಲಕ್ಷ ರೂಪಾಯಿ ವರದಕ್ಷಿಣೆ ಬೇಡಿಕೆ ಇಟ್ಟಿದ್ದಾನೆ. ಇವರು ಯುವಕ ಹೇಳಿದ ಬ್ಯಾಂಕ್ ಖಾತೆಗೆ 18 ಲಕ್ಷ ರೂಪಾಯಿ ಹಾಕಿದ್ದಾರೆ. ಮುಂದೆ ಒಂದಲ್ಲ ಒಂದು ಕಾರಣ ಹೇಳುತ್ತಾ ಮದುವೆ ಮುಂದಕ್ಕೆ ಹಾಕುತ್ತಾ ಬಂದಿದೆ. ಬಳಿಕ ಮದುವೆಯನ್ನೇ ನಿರಾಕರಿಸಿದ್ದಾನೆ.
ಇವನಿಂದ ಮೋಸ(Fraud) ಹೋದ ಸಂತ್ರಸ್ತೆ ಹಣ ಕೇಳಿದರೆ ಅದನ್ನು ಕೊಡದೆ ಯಾಮಾರಿಸಿದ್ದಾನೆ. ಈ ಕುರಿತು ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಪೊಲೀಸರಿಗೆ ಯುವತಿ ದೂರು ನೀಡಿದ್ದಾಳೆ. ಇವರ ವಿರುದ್ಧ ಐಪಿಸಿ ಸೆಕ್ಷನ್ 318, 321 ಹಾಗೂ 190ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮೋಸ ಮಾಡಿದ ಯುವಕ ಹಾಗೂ ಕುಟುಂಬಸ್ಥರ ಪತ್ತೆ ಕಾರ್ಯವನ್ನು ಪೊಲೀಸರು ನಡೆಸಿದ್ದಾರೆ.