ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಆಗಸ್ಟ್ 15ರಂದು ದೇಶದ ತುಂಬಾ 78ನೇ ಸ್ವಾತಂತ್ರ್ಯೋತ್ಸವನ್ನು(independence day) ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರಧಾನಿ(Modi) ಮೋದಿ 11ನೇ ಬಾರಿಗೆ ದೆಹಲಿಯ ಕೆಂಪುಕೋಟೆಯ(red fort) ಮೇಲೆ ಧ್ವಜಾರೋಹಣ ಮಾಡಲಿದ್ದಾರೆ. ಈ ವೇಳೆ ಅನೇಕ ಗಣ್ಯಾತಿಗಣ್ಯರು ಸಾಕ್ಷಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯದ 6 ಗ್ರಾಮ ಪಂಚಾಯ್ತಿಗಳ ಮಹಿಳಾ ಅಧ್ಯಕ್ಷರಿಗೆ ಆಹ್ವಾನ ನೀಡಲಾಗಿದೆ.
ಗ್ರಾಮ ಪಂಚಾಯ್ತಿಯ(GP) ವ್ಯಾಪ್ತಿಯಲ್ಲಿ ಪರಿಸರ ಕಾಳಜಿ, ಅಚ್ಚುಕಟ್ಟಾದ ಆಡಳಿತ ನಿರ್ವಹಣೆ, ಕರ ವಸೂಲಿ, ನೀರು ಸರಬರಾಜು ಸೇರಿದಂತೆ ಪ್ರತಿಯೊಂದರಲ್ಲಿ ಉತ್ತಮ ಆಡಳಿತ ನೀಡಿದ್ದಕ್ಕಾಗಿ 6 ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರಿಗೆ ವಿಶೇಷ ಆಹ್ವಾನ ಬಂದಿದೆ. ಇವರೆಲ್ಲರನ್ನು ಪಂಚಯಾತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕಲಬುರಗಿ ಜಿಲ್ಲೆ ತಾಜ್ ಸುಲ್ತಾನಪುರ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಜಯಶ್ರೀ, ಹುಕ್ಕೇರಿ ತಾಲೂಕಿನ ಕಮತನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಾಜೇಶ್ವರಿ ಗುತ್ತಿ, ಗೌರಿಬಿದನೂರು ತಾಲೂಕಿನ ಗೆದರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮಿನರಸಮ್ಮ, ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಕನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ದೇವಿ ಪಿ.ಟಿ ಹಾಗೂ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಫೀಜಾ ಅವರಿಗೆ ವಿಶೇಷ ಆಹ್ವಾನ ನೀಡಲಾಗಿದೆ.