ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾಗುತ್ತಾ ಬರುತ್ತಿದೆ. ಆದರೆ, ಪಕ್ಷ ಹಾಗೂ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಬದಲಾವಣೆ ವಿಚಾರ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಆಗಾಗ ಮುನ್ನಲೆಗೆ ಬರುತ್ತಿದೆ. ಹಲವು ಸಚಿವರು, ಶಾಸಕರು ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ. ಹೈಕಮಾಂಡ್ ಮೂಲಕ ಅದನ್ನು ತಣ್ಣಗಾಗಿಸುವ ಕೆಲಸ ಮಾಡಿಕೊಂಡು ಬರಲಾಗುತ್ತಿದೆ. ಆದರೆ, ಸರ್ಕಾರದೊಳಗೆ ಅಸಮಾಧಾನ ಇರುವುದು ಮಾತ್ರ ಬಹಿರಂಗ ಸತ್ಯ.
ಸೋಮವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಡುವೆ ಅಸಮಾಧಾನ ಹೊರ ಬಂದಿದೆ ಎಂದು ಹೇಳಲಾಗುತ್ತಿದೆ. ಸಚಿವರು, ಶಾಸಕರು ಪಕ್ಷ ಸಂಘಟನೆ ಹೆಚ್ಚು ಗಮನ ಹರಿಸಬೇಕು. ಪಕ್ಷದ ಕಚೇರಿ ನಿರ್ಮಾಣಕ್ಕೆ ಆಸಕ್ತಿ ವಹಿಸಬೇಕು. ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪಕ್ಷದ ಕಚೇರಿ ಕೆಲಸ ಚುರುಕಾಗಿ ಮುಗಿಸಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳುತ್ತಿದ್ದಂತೆ ಸಚಿವ ಸತೀಶ್ ಜಾರಕಿಹೊಳಿ ಮಧ್ಯಪ್ರವೇಶಿಸಿ ವಾಸ್ತುವಾಂಶ ಮರೆಮಾಚಿ ತಪ್ಪು ಸಂದೇಶ ನೀಡಬಾರದು ಎಂದಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಗೆ ನಿವೇಶನ ನೀಡಿದ್ದ ಹಿಂದಿನ ಕಾಂಗ್ರೆಸ್ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ. ಕಟ್ಟಡ ನಿರ್ಮಾಣಕ್ಕೆ ನಾನು 3 ಕೋಟಿ ರೂಪಾಯಿ ಖರ್ಚು ಮಾಡಿದ್ದೇನೆ. ವಾಸ್ತುವಾಂಶ ಮರೆಮಾಚಬಾರದು ಎಂದರು. ಈ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿ, ನಾನು ಸಚಿವೆಯಾದ ಮೇಲೆ ಕಟ್ಟಡ ನಿರ್ಮಾಣಕ್ಕೆ ಬಾಕಿಯಿದ್ದ ಹಣದ ಸೌಲಭ್ಯ ಒದಗಿಸಲಾಗಿದೆ. ವಿದ್ಯುತ್ ಬಿಲ್, ನೀರಿನ ಬಿಲ್ ಸೇರಿ 7 ಕೋಟಿ ರೂಪಾಯಿಗಳನ್ನು ದಾನಿಗಳ ಸಹಕಾರದಿಂದ ನೀಡಲಾಗಿದೆ ಎಂದರು. ಪರಿಸ್ಥಿತಿ ಅರಿತ ಸಿಎಂ ಸಿದ್ದರಾಮಯ್ಯ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದಕ್ಕೆ ಕಟ್ಟಡ ಪೂರ್ತಿಯಾಗಿದೆ. ಖುಷಿಯ ವಿಚಾರ. ಚರ್ಚೆ ಬೇಡ ಎಂದು ಅಸಮಾಧಾನ ವಿಕೋಪಕ್ಕೆ ಹೋಗುವುದನ್ನು ತಡೆದಿದ್ದಾರೆ. ಇದೆಲ್ಲ ನೋಡಿದರೆ ಸರ್ಕಾರದಲ್ಲಿ ಒಡಕು ಮೂಡಿತಿದ್ಯಾ ಎನ್ನುವ ಪ್ರಶ್ನೆ ಇದೆ.
ಸಿಎಂ ಸಿದ್ದರಾಮಯ್ಯ ಬಣ, ಡಿಸಿಎಂ ಡಿ.ಕೆ ಶಿವಕುಮಾರ್ ಬಣ, ಸಚಿವ ಸತೀಶ್ ಜಾರಕಿಹೊಳಿ ಬಣ ಎನ್ನುವ ರೀತಿಯಲ್ಲಿ ಬಿಂಬಿತವಾಗುತ್ತಿದೆ. ಇದೆಲ್ಲದರ ಹಿಂದೆ ಇರುವುದು ಮುಂದೆ ತಾವು ಮುಖ್ಯಮಂತ್ರಿ ಆಗಬೇಕು ಎನ್ನುವುದು. ಸಚಿವರಾದ ಕೆ.ಎನ್ ರಾಜಣ್ಣ, ಜಿ.ಪರಮೇಶ್ವರ್, ಆರ್.ಬಿ ತಿಮ್ಮಾಪೂರ ಸೇರಿ ಹಲವು ಸಚಿವರು, ಶಾಸಕರು ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಎರಡನೇ ವರ್ಷ ಅಧಿಕಾರ ಹಂಚಿಕೆ ವಿಚಾರ ಸಹ ಚರ್ಚೆಗೆ ಬರುತ್ತಿದೆ. ಕೆಲವರು ಈ ಬಗ್ಗೆ ಗೊತ್ತಿಲ್ಲ ಎನ್ನುತ್ತಾರೆ. ಇನ್ನು ಕೆಲವರು ಸಿದ್ದರಾಮಯ್ಯ ಐದು ವರ್ಷ ಸಿಎಂ ಎನ್ನುತ್ತಾರೆ. ನನಗೆ ಯಾರ ಬೆಂಬಲ ಬೇಡ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳ್ತಾರೆ. ಒಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಸಮಾಧಾನ ಇರುವುದು ಮಾತ್ರ ಸತ್ಯ.