ಪ್ರಜಾಸ್ತ್ರ ಸುದ್ದಿ
ಯಾದಗಿರಿ(Yadagiri): ರಾಜ್ಯದಲ್ಲಿ ಸಧ್ಯ ಕಾಂಗ್ರೆಸ್ ಸರ್ಕಾರವಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ನಡೆಸುತ್ತಿದ್ದಾರೆ. ಇವರ ನಂತರ ನಾನು ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವ ರೀತಿಯ ಚರ್ಚೆಗಳು ಕೈ ಪಾಳೆಯದಲ್ಲಿ ನಡೆಯುತ್ತಿದ್ದರೆ, ಡಿ.ಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ. ಸಿದ್ದರಾಮಯ್ಯರನ್ನು ಕೆಳಗೆ ಇಳಿಸುತ್ತಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಇದೆಲ್ಲದರ ನಡುವೆ ಈಗ ಕೋಡಿಹಳ್ಳಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದ ಭವಿಷ್ಯ, ಡಿ.ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರಲ್ಲಿ ಒಂದಿಷ್ಟು ಆತಂಕ ಮೂಡಿಸಿದೆ. ಹಾಲುಮತದವರ ಕೈಯಲ್ಲಿ ರಾಜ್ಯದ ಆಡಳಿತವಿದೆ. ಇದನ್ನು ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಎಂದು ಹೇಳಿದ್ದಾರೆ. ಅಲ್ಲಿಗೆ ಬಹುದೊಡ್ಡ ಕುತೂಹಲ ಮೂಡಿದೆ.
ಪ್ರಾಚೀನ ಕಾಲದಿಂದಲೂ ಹಾಲುಮತದವರು ಕಾಡಿನಲ್ಲಿದ್ದು, ಕುರಿಯನ್ನು ಸಾಕಿ ಹಿಕ್ಕಿಯಲ್ಲಿ ಲಿಂಗ ಕಂಡು ದೈವಾರಾಧನೆ ಮಾಡಿಕೊಂಡು ಬಂದಿದ್ದಾರೆ. ಪ್ರಕೃತಿಯಲ್ಲಿ ಕಂಡಿದ್ದು, ತಿಳಿದಿದ್ದು, ಅನುಭವಿಸಿದ್ದು, ಕೇಳಿದ್ದು ಹೇಳುತ್ತಾ ಬಂದಿದ್ದಾರೆ. ಹಾಲುಮತದ ಕೈಯಲ್ಲಿನ ಅಧಿಕಾರ ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಸಂಕ್ರಾಂತಿ ಭವಿಷ್ಯ ರಾಜ, ಮಹಾರಾಜರಿಗೆ, ವ್ಯಾಪಾರಿಗಳಿಗೆ ಇದ್ದರೆ, ಯುಗಾದಿ ಮಳೆ, ಗಾಳಿ, ನಾಡಿನ ಸುಭಿಕ್ಷೆ, ಸುಖ ದುಃಖ ಹೇಳುವುದಾಗಿದೆ. ಮಳೆ, ಬೆಳೆ ಸಮಸ್ಯೆಯಿಲ್ಲ. ಜಾಗತಿಕವಾಗಿ ಕಳೆದ ವರ್ಷಕ್ಕಿಂತ ಭೀಕರತೆಯಿದೆ ಎಂದು ಭವಿಷ್ಯ ನುಡಿದಿದ್ದಾರೆ.