ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belgavi): ಗುರುವಾರ ಪರಿಷತ್ ನಲ್ಲಿ ನಡೆದ ಗಲಾಟೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಎಂಎಲ್ಸಿ ಸಿ.ಟಿ ರವಿ ಅವಾಚ್ಯ ಶಬ್ಧ ಬಳಸಿದ್ದಾರೆ ಎನ್ನುವ ಆರೋಪ ಕೇಸ್, ಕೋರ್ಟ್ ಹಂತಕ್ಕೆ ಬಂದಿದೆ. ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಅಂಬೇಡ್ಕರ್ ಅವರಿಗೆ ಅಗೌರವ ಆಗಿರುವುದನ್ನು ಖಂಡಿಸಿ ನಿನ್ನೆ ನಾವು ಪ್ರತಿಭಟನೆ ನಡೆಸಿದೇವು. ಯಾಕಂದರೆ, ಅಂಬೇಡ್ಕರ್ ಅವರಿಂದಲೇ ನಾವು ಶಾಸಕರು, ಮಂತ್ರಿ ಆಗಿರುವುದು. ಪ್ರತಿಭಟನೆ ಬಳಿಕ ನಾವು ಸೀಟ್ ನಲ್ಲಿ ಕುಳಿತಿದ್ದೇವು. ಏಕಾಏಕಿ ಸಿ.ಟಿ ರವಿಯವರು ರಾಹುಲ್ ಗಾಂಧಿ ಡ್ರಗ್ ಎಡಿಕ್ಟ್ ಎಂದರು ಅಂತಾ ಹೇಳಿದ್ದಾರೆ.
ಅವರ ಮಾತಿನಿಂದ ಸಿಟ್ಟು ಬಂದು ನೀವು ಅಪಘಾತ ಮಾಡಿದ್ದೀರಿ. ನೀವು ಕೊಲೆಗಾರರಾಗುತ್ತೀರಿ ಎಂದು ನಾನು ಹೇಳಿದೆ. ಆದರೆ, ಅವರು ನನಗೆ ಹೇಳಬಾರದ ಪದ ಹೇಳಿದರು. ಅದನ್ನು ಪದೆಪದೆ ಮೂರ್ನಾಲ್ಕು ಸಾರಿ ಹೇಳಿದ್ದಾರೆ ಎಂದು ಕಣ್ಣೀರು ಹಾಕಿದರು. ಆಗ ಎಲ್ಲರೂ ದೃತರಾಷ್ಟ್ರರಾದರು. ನನ್ನ ಪಕ್ಷದವರು ನನ್ನ ಬೆನ್ನಿಗೆ ನಿಂತರು. ನಾನೊಬ್ಬ ಮಹಿಳೆ, ತಾಯಿ, ಸಹೋದರಿ, ಅತ್ತೆ. ಆ ತರ ಹೇಳಿದ್ದಕ್ಕೆ ನನಗೆ ಅಪಮಾನವಾಗಿದೆ ಎಂದು ಗದ್ಗಗದಿತರಾದರು.
ರಾಹುಲ್ ಗಾಂಧಿಯವರ ಹೆಸರನ್ನು ಸುಖಾಸುಮ್ಮನೆ ತಂದರು. ನೀವು ಅಪಘಾತ ಮಾಡಿ ಮೂವರ ಕೊಲೆಗೆ ಕಾರಣರಾಗಿದ್ದೀರಿ. ನೀವು ಕೊಲಗಡುಕ ಎಂದು ಹೇಳಿದ್ದು ನಿಜ. ಆ ಮಾತಿನಿಂದ ಹಿಂದೆ ಸರಿಯಲ್ಲ. ಹೆಣ್ಣಿನ ಶೀಲದ ಬಗ್ಗೆ ಬಳಸಬಾರದ ಪದ ಬಳಿಸಿದ ಸಿ.ಟಿ ರವಿ ವಿರುದ್ಧ ಕ್ರಮಯಾಗಬೇಕು ಎಂದು ಆಗ್ರಹಿಸಿದರು.