ಪ್ರಜಾಸ್ತ್ರ ಸುದ್ದಿ
ಉಡುಪಿ(Udupi): ಸಂಬಂಧಿಕ ಮಹಿಳೆಯೊಬ್ಬರಿಗೆ ಯಕೃತ್ತಿನ(Liver) ಕಸಿಗೆ ದಾನ ನೀಡಿದ ಉಪನ್ಯಾಸಕಿ ತಮ್ಮ ಪ್ರಾಣ ಕಳೆದುಕೊಂಡ ಘಟನೆ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ನಡೆದಿದೆ. 34 ವರ್ಷದ ಅರ್ಚನಾ ಕಾಮತ್ ಮೃತ ದುರ್ದೈವಿ. 4 ವರ್ಷದ ಮಗು, ಪತಿ, ತಂದೆ, ತಾಯಿ ಸೇರಿದಂತೆ ಅನೇಕರನ್ನು ಅಗಲಿದ್ದಾರೆ. ಅರ್ಚನಾ ಮನೆಯಲ್ಲಿ ಆಕ್ರಂದನ ತುಂಬಿಕೊಂಡಿದೆ. ಊರಿನ ಜನರು ಸೇರಿ ಪ್ರತಿಯೊಬ್ಬರು ಕಂಬನಿ ಮಿಡಿಯುತ್ತಿದ್ದಾರೆ.
69 ವರ್ಷದ ಸಂಬಂಧಿ ಮಹಿಳೆಯೊಬ್ಬರಿಗೆ ಯಕೃತ ದಾನ ಮಾಡಿದ್ದರು. ಹೀಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಯಕೃತ ದಾನದ ಬಳಿಕ ಕೆಲ ದಿನ ಆರಾಮಾಗಿದ್ದರು. ನಂತರ ಅವರಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಪರೀಕ್ಷೆ ಮಾಡಿದರೆ ಅವರಿಗೆ ಸೋಂಕು(Infection) ತಗುಲಿದೆ. ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರೂ ಅದು ಫಲಿಸದೆ ಮೃತಪಟ್ಟಿದ್ದಾರೆ. ಉಪನ್ಯಾಸಕಿಯಾಗಿದ್ದ ಅರ್ಚನಾ ಸಮಾಜಮುಖಿ ಕೆಲಸದಲ್ಲಿ ಸಾಕಷ್ಟು ತೊಡಗಿಸಿಕೊಂಡಿದ್ದರು. ವೃತ್ತಿಯಲ್ಲಿಯೂ ಒಳ್ಳೆಯ ಹೆಸರು ಮಾಡಿದ್ದರು. ಯಕೃತ ದಾನ ಮಾಡಿದ ಬಳಿಕ ವಿಶ್ರಾಂತಿ ಪಡೆಯಬೇಕಿತ್ತು. ಆದರೆ, ಕೆಲ ದಿನಗಳ ಬಳಿಕ ತಮ್ಮ ಉಪನ್ಯಾಸಕಿ ವೃತ್ತಿಗೆ ಹೋಗಿದ್ದಾರೆ. ಇದು ಅವರ ಜೀವಕ್ಕೆ ಕುತ್ತು ತಂದಿತೊ, ಮತ್ತೇನೋ ಆಯ್ತೊ ತಿಳಿಯದು. ಆದರೆ, ಪರೋಪಕಾರ ಮಾಡಲು ಹೋಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.