ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ವಸತಿ ಯೋಜನೆ ಅಡಿಯಲ್ಲಿ ಮನೆಗಳ ಹಂಚಿಕೆಗೆ ಸಂಬಂಧಿಸಿದಂತೆ ಹಣ ಪಡೆಯಲಾಗುತ್ತಿದೆ ಎನ್ನುವ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ ಹೇಳಿಕೆ, ದೊಡ್ಡ ಸಂಚಲನ ಮೂಡಿಸಿದೆ. ಹೀಗಾಗಿ ಸ್ವತಃ ಕಾಂಗ್ರೆಸ್ ಶಾಸಕರೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಶಾಸಕ ರಾಜು ಕಾಗೆ ರಾಜೀನಾಮೆ ಕೊಡುವ ಮಾತುಗಳನ್ನು ಆಡಿದ್ದಾರೆ. ಇನ್ನೋರ್ವ ಶಾಸಕ ಬೇಳೂರು ಗೋಪಾಲಕೃಷ್ಣ, ಸಚಿವ ಸ್ಥಾನಕ್ಕೆ ಜಮೀರ್ ಅಹ್ಮದ್ ರಾಜೀನಾಮೆ ಕೊಡುವುದು ಒಳ್ಳೆಯದು ಎಂದಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಂಚದ ಬಗ್ಗೆ ಹಿರಿಯ ಸದಸ್ಯರೊಬ್ಬರು ಧ್ವನಿ ಎತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಸಚಿವರು ತನಿಖೆಗೆ ಒಳಪಡಬೇಕು. ಆರೋಪ ಬಂದಿರುವ ಹಿನ್ನಲೆಯಲ್ಲಿ ಸಚಿವ ಸ್ಥಾನಕ್ಕೆ ಜಮೀರ್ ಅಹ್ಮದ್ ರಾಜೀನಾಮೆ ಕೊಡುವುದು ಒಳ್ಳೆಯದು. ತನಿಖೆ ಎದುರಿಸಲಿ. ಹಗರಣ ನಡೆದಿಲ್ಲ ಅನ್ನೋದು ತನಿಖೆಯಿಂದ ಗೊತ್ತಾದ ಮೇಲೆ ಮತ್ತೆ ಸಚಿವ ಸ್ಥಾನ ಪಡೆಯಲಿ. ಈ ಹಿಂದೆ ಬೇರೆ ಬೇರೆ ಹಗರಣಗಳಲ್ಲಿ ರಾಜೀನಾಮೆ ಕೊಟ್ಟಿದ್ದಾರೆ. ಹೀಗಾಗಿ ಜಮೀರ್ ಅಹ್ಮದ್ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಒಳ್ಳೆಯದು ಎಂದಿದ್ದಾರೆ.