ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಬಿಜೆಪಿ ಬಹಿರಂಗ ಜಗಳ, ಆಂತರಿಕ ಜಗಳ ಹೆಚ್ಚಾಗುತ್ತಿದೆ. ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅವರು ಮೊನ್ನೆ ನಡೆಸಿದ ಸಭೆಯಲ್ಲಿ ಸಂಡೂರು ಉಪ ಚುನಾವಣೆ ಸೋಲಿಗೆ ಶ್ರೀರಾಮುಲು(B.Sriramulu) ಕಾರಣವೆಂದು ನೇರವಾಗಿ ಹೇಳಿದ್ದು, ದೊಡ್ಡ ಮಟ್ಟದಲ್ಲಿ ಬೆಂಕಿ ಹತ್ತಿಕೊಳ್ಳಲು ಕಾರಣವಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು, ಒಂದು ಕಾಲದ ಆಪ್ತ ಗೆಳೆಯ, ಹಿರಿಯಣ್ಣ ಎನ್ನುತ್ತಿದ್ದ ಶಾಸಕ ಗಾಲಿ ಜನಾರ್ದನ್ ರೆಡ್ಡಿ ವಿರುದ್ಧ ಆರೋಪ ಮಾಡಿದ್ದಾರೆ. ದೆಹಲಿಯ ತನಕ ನನ್ನ ಬಗ್ಗೆ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ. ಪಕ್ಷದಲ್ಲಿ ಇರು ಅಂದರೆ ಇರುತ್ತೇನೆ. ಹೋಗು ಅಂದರೆ ಹೋಗುತ್ತೇನೆ. ಆದರೆ, ಹೋಗುವ ಮೊದಲು ಪ್ರಧಾನಿ ಮೋದಿ ಸೇರಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಎಲ್ಲ ಹೇಳಿ ಬರುತ್ತೇನೆ. ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಇದರ ಹಿಂದೆ ಜನಾರ್ದನ್ ರೆಡ್ಡಿ ಅವರಿದ್ದಾರೆ ಎಂದು ಆರೋಪಿಸಿದ್ದರು.
ಶ್ರೀರಾಮುಲು ಆರೋಪಕ್ಕೆ ಇಂದು ತಿರುಗೇಟು ನೀಡಿರುವ ಜನಾರ್ದನ್(Janardhan Reddy) ರೆಡ್ಡಿ, 40 ವರ್ಷಗಳಿಂದ ನಾನು ಅವರಿಗೆ ಸಹಾಯ ಮಾಡಿದ್ದೇನೆ. ವೈಯಕ್ತಿಕವಾಗಿ ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ. ಆದರೆ, ನನ್ನ ಮೇಲೆ ಆರೋಪ ಮಾಡಿ ಹೋಗುವುದು ಬೇಡ. ಕ್ರೈಂನಲ್ಲಿ ಇದ್ದವನ್ನು ಒಳ್ಳೆಯ ರಾಜಕಾರಣಿ ಮಾಡಿದ್ದು ನನ್ನ ತಪ್ಪಾ ಎಂದು ಪ್ರಶ್ನಿಸಿದ್ದಾರೆ. ಪಕ್ಷ ಯಾರ ಪರ ಕೆಲಸ ಮಾಡು ಎಂದು ಹೇಳುತ್ತೋ ಅವರ ಪರ ಮಾಡುತ್ತೇನೆ. ನಾಳೆ ಶ್ರೀರಾಮುಲು ಪರ ಕೆಲಸ ಮಾಡಂದರು ಮಾಡುತ್ತೇನೆ. ಮೋದಿ ಪ್ರಧಾನಿ ಅಭ್ಯರ್ಥಿ ಎಂದಾಗ ಅಡ್ವಾನಿ ಸೇರಿ ಎಲ್ಲರೂ ಒಪ್ಪಿದರು. ವಿಜಯೇಂದ್ರ ರಾಜ್ಯಾಧ್ಯಕ್ಷರು ಅಂದರೆ ನಾವು ಒಪ್ಪಬೇಕು ಎಂದರು.
ಶ್ರೀರಾಮುಲು ಸೋದರ ಮಾವನ ಕೊಲೆಯಾದಾಗ ಬೀದಿಯಲ್ಲಿದ್ದರು. ನಮ್ಮ ಮನೆಗೆ ಬಂದಿದ್ದರು. 2004ರಲ್ಲಿ ರಾಘವೇಂದ್ರ ಎನ್ನುವ ಕಾರ್ಪೂರೇಟರ್ ಹತ್ಯೆಯ ಆರೋಪ ಶ್ರೀರಾಮುಲು ಮೇಲೆ ಬಂದಿತ್ತು. ನಮ್ಮ ತಾಯಿ ಅವರಿಗೆ ಧೈರ್ಯ ತುಂಬಿದ್ದರು. ಕಾಂಗ್ರೆಸ್ ನ ಸೂರ್ಯ ನಾರಾಯಣರೆಡ್ಡಿ, ದಿವಾಕರ ಬಾಬು ಹತ್ಯೆ ಮಾಡಲು ದಿನಗಳನ್ನು ಎಣಿಸುತ್ತಿದ್ದರು. ಅವರ ಸೋದರ ಮಾವನ ಹತ್ಯೆಗೆ ಸೂರ್ಯ ನಾರಾಯಣರೆಡ್ಡಿ ಹಣ ನೀಡಿದ್ದರು ಎನ್ನುವ ಆರೋಪದ ಮೇಲೆ ಅವರನ್ನು ಕೊಲೆ ಮಾಡುತ್ತೇನೆ ಎಂದಿದ್ದರು. ರಾಮಾಯಣ, ಮಹಾಭಾರತ ಕಥೆ ಹೇಳಿ ಒಳ್ಳೆಯ ದಾರಿಗೆ ತಂದೆ. ಮೊಳಕಾಲ್ಮೂರಿನಲ್ಲಿ 35 ಸಾವಿರದಿಂದ ಗೆಲಿಸಿದ್ದು ನಾನು ಮಾಡಿದ ತಪ್ಪು. ಸತೀಶ್ ಜಾರಕಿಹೊಳಿಗೆ ಪರ್ಯಾಯವಾಗಿ ಶ್ರೀರಾಮುಲು ಬೆಳೆಸಲು ಡಿ.ಕೆ ಶಿವಕುಮಾರ್ ಎತ್ತಿಕಟ್ಟುತ್ತಿದ್ದಾರೆ ಎಂದು ಕಿಡಿ ಕಾರಿದರು.