ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಿಲ್ಲೆಯಲ್ಲಿರುವ ವಿವಿಧ ಸರ್ಕಾರಿ, ಖಾಸಗಿ ಕಚೇರಿ, ಶಾಲೆ, ಆಸ್ಪತ್ರೆ ಅಂಗಡಿ ಮುಂಗಟ್ಟುಗಳ ಮಾಲೀಕರು ಕಡ್ಡಾಯವಾಗಿ ಕನ್ನಡ ನಾಮಪಲಕ ಅಳವಡಿಸುವ ಕುರಿತು ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಟಿ.ಭೂಬಾಲನ್ ನೇತೃತ್ವದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡಪರ ಸಂಘಟನೆಗಳೊಂದಿಗೆ ನಗರದ ಸೋಲಾಪುರ ರಸ್ತೆಯಲ್ಲಿರುವ ಬಂಜಾರಾ ಕ್ರಾಸ್‌ದಿಂದ ಜಾಥಾ ಆರಂಭಿಸಿ, ಶಿವಾಜಿ ಸರ್ಕಲ್ ಮಾರ್ಗವಾಗಿ ಗಾಂಧಿ ವೃತ್ತದವರೆಗೂ ನಡೆಸಲಾಯಿತು.
ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಸರ್ಕಾರದ ಆದೇಶದಂತೆ ನಾಮಫಲಕಗಳು ಶೇಕಡ 60ರಷ್ಟು ಕನ್ನಡ ಭಾಷೆ ಒಳಗೊಂಡಿರಬೇಕು. ಇದೇ ಅಕ್ಟೋಬರ್ 30ರೊಳಗೆ ಜಿಲ್ಲೆಯ ಎಲ್ಲ ನಾಮಫಲಕಗಳು ಕನ್ನಡ ಭಾಷೆಯನ್ನು ಒಳಗೊಂಡಿರಬೇಕು. ಅಕ್ಟೋಬರ್ 31ರ ನಂತರ ಕನ್ನಡ ಭಾಷೆ ಒಳಗೊಳ್ಳದ ನಾಮಫಲಕಗಳನ್ನು ಮುಟ್ಟುಗೊಲು ಹಾಕಿ, ಸಂಬಂಧಿಸಿದ ಅಂಗಡಿ, ಸಂಸ್ಥೆಗಳ ಮೇಲೆ ಯಾವುದೇ ಮುಲಾಜಿಲ್ಲದೇ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಕನ್ನಡ ನಾಮಫಲಕ ನಿಯಮಗಳ ಉಲ್ಲಂಘನೆಗಾಳಿಗಾಗಿ ಯಾವುದೇ ಕೈಗಾರಿಕಾ, ಅಂಗಡಿ, ವಾಣಿಜ್ಯ ಸಂಸ್ಥೆಯ ಮಾಲೀಕರಿಗೆ ಮೊದಲನೇ ಅಪರಾಧಕ್ಕಾಗಿ 5 ಸಾವಿರ ದಂಡ, ನಂತರದ ಎರಡನೇ ಅಪರಾಧಕ್ಕಾಗಿ 10 ಸಾವಿರದವರಗೆ ವಿಸ್ತರಿಸಬುಹುದಾದ ದಂಡ, ನಂತರ ಪ್ರತಿಯೊಂದು ಅಪರಾಧಕ್ಕಾಗಿ 20 ಸಾವಿರದವರಗೆ ದಂಡ ಮತ್ತು ಪರವಾನಿಗೆ ರದ್ದುಪಡಿಸಲಾಗುವುದು ಎಂದು ಜಾಗೃತಿ ಮೂಡಿಸಲಾಯಿತು. ಈ ವೇಳೆ ಕನ್ನಡ ನಾಮಫಲಕ ಅಳವಡಿಸದ ಅಂಗಡಿ ಮಾಲೀಕರಿಗೆ ನೋಟೀಸ್ ನೀಡಿ ಅಕ್ಟೋಬರ್ 31ರ ಒಳಗೆ ಕನ್ನಡ ನಾಮಫಲಕ ಅಳವಡಿಸಬೇಕು ಎಂದು ಎಚ್ಚರಿಕೆ ನೀಡಲಾಯಿತು.