ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನ ಬನ್ನೆಟ್ಟಿ ಪಿ.ಎ ಗ್ರಾಮದ ಮಾದೇವಪ್ಪ ಹರಿಜನ(ಪೂಜಾರಿ) ಕೊಲೆಯನ್ನು ಖಂಡಿಸಿ ಸೆಪ್ಟೆಂಬರ್ 19ರಂದು ಬನ್ನೆಟ್ಟಿ ಗ್ರಾಮದಿಂದ ತಹಶೀಲ್ದಾರ್ ಕಚೇರಿ ತನಕ ಕಾಲ್ನಡಿಗೆ ಜಾಥಾ ನಡೆಸಲು ದಲಿತ ಸಂಘರ್ಷ ಸಮಿತಿ ನಾಗವಾರ ಬಣದಿಂದ ಹಮ್ಮಿಕೊಳ್ಳಲಾಗಿದೆ ಎಂದು ಪುರಸಭೆ ಮಾಜಿ ಸದಸ್ಯ, ದಲಿತ ಮುಖಂಡ ರಾಜಶೇಖರ ಕುಚಬಾಳ ಹೇಳಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೆಯಾಗಿ ಐದಾರು ತಿಂಗಳು ಕಳೆದಿವೆ. ಆದರೆ, ಆರೋಪಿಗಳನ್ನು ಬಂಧಿಸದೆ, ತನಿಖೆ ನಡೆಸದೆ ವಿಳಂಬ ಮಾಡುತ್ತಿರುವುದು ಪೊಲೀಸರ ವೈಫಲ್ಯ. ಸಂಶಾಸ್ಪದ ವ್ಯಕ್ತಿಗಳನ್ನು ಬಂಧಿಸಿ ಮಂಪರು ಪರೀಕ್ಷೆಗೆ ಒಳಪಡಿಸಿ ಸತ್ಯಾಸತ್ಯತೆಯನ್ನು ಹೊರ ತರಬೇಕಾಗಿರುವುದು ಪೊಲೀಸರ ಕರ್ತವ್ಯ. ಇದರ ಹಿಂದೆ ಯಾರ ಕೈವಾಡವಿದೆ? ಕೊಲೆಗಾರರನ್ನು ರಕ್ಷಿಸುವ ಕೆಲಸ ಆಗ್ತಿದ್ಯಾ ಏನು ಅನ್ನೋ ಸಂಶಯ ಮೂಡಿದೆ ಎಂದರು.
ಡಿಎಸ್ಎಸ್(ನಾಗವಾರ ಬಣ) ಜಿಲ್ಲಾ ಸಂಚಾಲಕ ಶ್ರೀಕಾಂತ ಸಿಂಗೆ ಮಾತ್ನಾಡಿ, ಕೊಲೆಯಾಗಿ ಐದಾರು ತಿಂಗಳು ಕಳೆದಿವೆ. ಆದರೂ ಇದುವರೆಗೂ ಆರೋಪಿಗಳನ್ನು ಬಂಧಿಸುವ ಕೆಲಸವಾಗಿಲ್ಲ. ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ 24 ಗಂಟೆಯಲ್ಲಿಯೇ ಕೊಲೆಗಾರರನ್ನು ಪೊಲೀಸರು ಬಂಧಿಸಿರುವ ಉದಾಹರಣೆಗಳಿವೆ. ಆದರೆ, ಈ ಪ್ರಕರಣದಲ್ಲಿ ಪೊಲೀಸರು ನಡೆದುಕೊಳ್ಳುವ ರೀತಿ ಸಾಕಷ್ಟು ಸಂಶಯ ಮೂಡಿಸಿದೆ. ಹೀಗಾಗಿ ಸೆಪ್ಟೆಂಬರ್ 19ರಂದು ಬನ್ನೆಟ್ಟಿ ಪಿ.ಎ ಗ್ರಾಮದಿಂದ ಕಾಲ್ನಡಿ ಜಾಥಾ ನಡೆಸಲಾಗುತ್ತೆ. ಸಂಜೆ ಬ್ಯಾಕೋಡ ಸಿಂದಗಿ ಮಧ್ಯದಲ್ಲಿರುವ ಜಲಧಾರೆ ಕಾಮಗಾರಿ ಸ್ಥಳದಲ್ಲಿ ವಾಸ್ತವ್ಯ ಹೂಡಲಾಗುವುದು. ಸೆಪ್ಟೆಂಬರ್ 20ರಂದು ಮುಂಜಾನೆ ಜಾಥಾ ಪ್ರಾರಂಭವಾಗಿ ಮಧ್ಯಾಹ್ನ ತಾಲೂಕು ಆಡಳಿತ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು. ನಂತರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಅಂತಾ ಹೇಳಿದರು.
ಕೊಲೆ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಈ ಕೇಸಿಗೆ ಸಂಬಂಧಿಸಿದಂತೆ ತನಿಖೆ ಮಾಡಲು ವಿಳಂಬ ಮಾಡಿದ ಅಧಿಕಾರಿಗಳನ್ನು ಅಮಾನತ್ತಿನಲ್ಲಿಡಬೇಕು. ಕೊಲೆಯಾದ ವ್ಯಕ್ತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು ಮತ್ತು ಕಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಬೇಕು ಅನ್ನೋ ಹಕ್ಕೋತ್ತಾಯ ಮಾಡಲಾಗಿದೆ.
ಮುಖಂಡರಾದ ಶರಣು ಶಿಂದೆ, ಪ್ರಕಾಶ ಗುಡಿಮನಿ ಮಾತನಾಡಿ, ಆರೋಪಿಗಳ ಹೆಸರು ಹೇಳಿದರೂ ಅವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿಲ್ಲ. ಎಸ್ಪಿ ಅವರಿಗೆ ತಿಳಿಸಲಾಗಿದೆ. ಇಂಡಿಗೆ ಮುಖ್ಯಮಂತ್ರಿಗಳು ಬಂದಾಗ ಮನವಿ ಸಹ ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಯಾವುದೇ ಕೆಲಸ ಮಾಡದೆ ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬ ಮಾಡುತ್ತಿರುವುದನ್ನು ರುವುದನ್ನು ಖಂಡಿಸಿ ಕಾಲ್ನಡಿಗೆ ಜಾಥಾ ಮಾಡಲಾಗುತ್ತಿದೆ. ಮುಂದೆ ಜಿಲ್ಲಾ ಬಂದ್ ಗೆ ಕರೆ ಕೊಡಲಾಗುವುದು ಎಂದು ಎಚ್ಚರಿಸಿದರು. ಈ ವೇಳೆ ಲಕ್ಷ್ಮಣ ಬನ್ನೆಟ್ಟಿ, ರವಿ ತಳಕೇರಿ, ರವಿ ಹಾಲಹಳ್ಳಿ, ಮುತ್ತು ಸುಲ್ಪಿ, ಮಹೇಶ ಜವಳಗಿ, ಮಂಜು ಯಂಟಮಾನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.