ಪ್ರಜಾಸ್ತ್ರ ಸುದ್ದಿ
ಮುದ್ದೇಬಿಹಾಳ(Muddebihala): ಇಲ್ಲಿನ ಬಸವ ಇಂಟರ್‌ನ್ಯಾಷನಲ್ ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಜೀಶಾನ್ ಸೂರಜ್ ರಿಸಾಲ್ದಾರ್ ಯೂತ್ ಗೇಮ್ಸ್ ಕೌನ್ಸಿಲ್ ಇಂಡಿಯಾ ವತಿಯಿಂದ ಗೋವಾದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಮಟ್ಟದ ಅಂಡರ್–10 ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ 100 ಮೀಟರ್ ಓಟವನ್ನು 15 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಸ್ಪರ್ಧಿಸಿದ ಜೀಶಾನ್, ಈ ಸಾಧನೆಯೊಂದಿಗೆ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಮುಂಬರುವ ದಿನಗಳಲ್ಲಿ ನೇಪಾಳದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಸ್ಪರ್ಧೆಯಲ್ಲಿ ಏಷ್ಯಾ ಖಂಡದ ವಿವಿಧ ರಾಷ್ಟ್ರಗಳ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಜೀಶಾನ್ ಈ ಸಾಧನೆಗೆ ಮುದ್ದೇಬಿಹಾಳ ಟೈಮ್ ಪತ್ರಿಕೆ ಬಳಗ, ಕರ್ನಾಟಕ ಮುಸ್ಲಿಂ ಕೌನ್ಸಿಲ್ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಅಭಿನಂದಿಸಿವೆ. ಶಾಲೆಯ ಪ್ರಾಚಾರ್ಯರಾದ ಪ್ರಭಾ ಚಿನಿವಾರ, ಶಾಲೆಯ ಅಧ್ಯಕ್ಷ ಶಿವಕುಮಾರ ಹರ್ಲಾಪುರ, ಶಿಕ್ಷಕರು, ದೈಹಿಕ ಶಿಕ್ಷಕರು ಹಾಗೂ ಕೋಚ್ ಸಿದ್ರಾಮ ಲಕ್ಷ್ಮಣ ಭಜಂತ್ರಿ ಸೇರಿದಂತೆ ಕುಟುಂಬಸ್ಥರು ಸಂಭ್ರಮ ವ್ಯಕ್ತಪಡಿಸಿದ್ದಾರೆ.




