ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಪ್ರತಿ ಸೀಸನ್ ಒಂದಲ್ಲ ಒಂದು ವಿವಾದ ಮಾಡಿಕೊಂಡು ಬರುತ್ತಿರುವ ಕನ್ನಡ ಬಿಗ್ ರಿಯಾಲಿಟಿ ಶೋ, ಸೀಸನ್ 11ರಲ್ಲೂ ಮುಂದುವರೆದಿದೆ. ಈ ಶೋ ವಿರುದ್ಧ ಇದೀಗ ಎರಡು ದೂರು ದಾಖಲಾಗಿವೆ. ಸಾಮಾಜಿಕ ಕಾರ್ಯಕರ್ತೆ ಎಂ.ನಾಗಮಣಿ ಹಾಗೂ ವಕೀಲೆ ರಕ್ಷಿತಾ ಸಿಂಗ್ ಎನ್ನುವರು ದೂರು ಸಲ್ಲಿಸಿದ್ದಾರೆ. ಎಂ.ನಾಗಮಣಿ ಅವರು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದರೆ ರಕ್ಷಿತಾ ಸಿಂಗ್ ಅವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಸ್ವರ್ಗ, ನರಕ ಎನ್ನುವ ಕಾನ್ಸೆಪ್ಟ್ ಮೇಲೆ ನಡೆಸುತ್ತಿರುವ ಟಾಸ್ಕ್ ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಅಕ್ರಮವಾಗಿ ಬಂಧಿಸಲಾಗಿದೆ. ಅವರಿಗೆ ಬರೀ ಗಂಜಿ ಕೊಡಲಾಗುತ್ತಿದೆ. ಒಪ್ಪಿಗೆ ಇದ್ದರೂ ಸಹ ಒಬ್ಬರನ್ನು ಬಂಧನದಲ್ಲಿಡುವುದು ಹಾಗೂ ಪೌಷ್ಠಿಕ ಆಹಾರ ಕೊಡದೆ ಇರುವುದು ಅಪರಾಧವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇನ್ನು ಈ ಶೋನಲ್ಲಿ ಮಹಿಳೆಯರಿಗೆ ಶೋಷಣೆ ಮಾಡಲಾಗುತ್ತಿದೆ. ಅವರ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಮಹಿಳೆಯರ ಖಾಸಗಿತನ, ಶೌಚಾಲಯಕ್ಕೆ ಮತ್ತೊಬ್ಬರ ಒಪ್ಪಿಗೆ ಪಡೆಯಬೇಕು. ಕಾನೂನುಬದ್ಧ ಒಪ್ಪಂದ ಮಾಡಿಕೊಂಡಿದ್ದರೂ ಸಂವಿಧಾನದ ಅಡಿಯಲ್ಲಿ ಅಪರಾಧ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಿರೂಪಕ, ನಟ ಕಿಚ್ಚ ಸುದೀಪ್, ಕಲರ್ಸ್ ಕನ್ನಡ ಬಿಸಿನೆಸ್ ಹೆಡ್ ಹಾಗೂ ವಯಾಕಾಮ್ 18 ಸಂಸ್ಥೆಯ ವಿರುದ್ಧ ದೂರು ಸಲ್ಲಿಸಲಾಗಿದೆ.