ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಪಾಲಿಸಿಲ್ಲವೆಂದು ಜಾಲಿವುಡ್ ಸ್ಟುಡಿಯೋಸ್ ಅಂಡ್ ಅಡ್ವೆಂಚರ್ಸ್ ಪಾರ್ಕ್ ಗೆ ಬುಧವಾರ ಸಂಜೆ ಬೀಗ ಹಾಕಲಾಗಿದೆ. ಇಲ್ಲಿ ಕನ್ನಡದ ಬಿಗ್ ಬಾಸ್ 12ನೇ ಆವೃತ್ತಿಯ ಶೋ ಸಹ ನಡೆಯುತ್ತಿದ್ದು, ಅದಕ್ಕೂ ಬಿಸಿ ತಟ್ಟಿದೆ. ಹೀಗಾಗಿ ಸ್ಪರ್ಧಿಗಳನ್ನು ಈಗಲ್ಟನ್ ರೆಸಾರ್ಟ್ ನಲ್ಲಿ ಇರಿಸಲಾಗಿದೆ. ಇಂದು ಸ್ಟುಡಿಯೋದ ವ್ಯವಸ್ಥಾಪಕರು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ 15 ದಿನಗಳ ಕಾಲಾವಕಾಶ ಕೇಳಿದರು.
ಸ್ಟುಡಿಯೋದಲ್ಲಿ 400 ಜನರು ಕೆಲಸ ಮಾಡುತ್ತಿದ್ದಾರೆ. ಈಗ ಬಿಗ್ ಬಾಸ್ ಶೋ ಸಹ ನಡೆಯುತ್ತಿದೆ. ಬೀಗ ಹಾಕಿರುವುದರಿಂದ ಕೆಲಸಕ್ಕೆ ಸಾಕಷ್ಟು ತೊಂದರೆಯಾಗಲಿದೆ. ಷರತ್ತುಬದ್ಧ ಅನುಮತಿ ಕೊಡಿ ಎಂದರು. ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಮಾತನಾಡಿ, ನಾವು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶ ಪಾಲಿಸಿದ್ದೇವೆ. ನೀವು ಅಲ್ಲಿ ಮನವಿ ಮಾಡಿ. ಅವರ ಆದೇಶದಂತೆ ನಾವು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.