ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ಆನ್ಲೈನ್ ಆಟಕ್ಕೆ ದಾಸನಾಗಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಬಿಎಸ್ ಪಿ ಅಂತಿಮ ವರ್ಷದ ವಿದ್ಯಾರ್ಥಿ ಸೋಮನಾಥ ಚಿದ್ರಿ(23) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಆನ್ಲೇನ್ ಆಟದಿಂದಾಗಿ ವಿದ್ಯಾರ್ಥಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದನಂತೆ. ಸಾಲ ತೀರಿಸಲು ಆಗದೆ ವಿದ್ಯಾರ್ಥಿ ಇಂತಹ ನಿರ್ಧಾರ ತೆಗೆದುಕೊಂಡಿದ್ದಾನಂತೆ.
ಬೀದರ ಜಿಲ್ಲೆಯ ಬಾಲ್ಕಿ ತಾಲೂಕಿನ ಡೋಣಗಾಪುರ ಮೂಲದ ವಿದ್ಯಾರ್ಥಿ ಜಿಮ್ಸ್ ಕಾಲೇಜಿನಲ್ಲಿ ಬಿಎಸ್ ಪಿ ಓದುತ್ತಿದ್ದ. ಆದರೆ, ಓದಿಗಿಂತ ಆನ್ಲೈನ್ ಗೇಮ್ ಚಟಕ್ಕೆ ಬಿದ್ದಿದ್ದ. ಇದರಿಂದಾಗಿ ಬರೋಬ್ಬರಿ 80 ಲಕ್ಷ ರೂಪಾಯಿ ಕಳೆದುಕೊಂಡಿದ್ದನಂತೆ. ಸಾಲ ಕೊಟ್ಟವರಿಗೆ ವಾಪಸ್ ಹಣ ಕೊಡಲು ಆಗದೆ ವೀರಶೈವ ಕಲ್ಯಾಣ ವಸತಿ ನಿಲಯದ ಹಿಂಭಾಗದಲ್ಲಿನ ಮರಕ್ಕೆ ನೇಣು ಹಾಕಿಕೊಂಡಿದ್ದಾನೆ. ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.