ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಕನ್ನಡದ ಕೆಡಿ ಚಿತ್ರದ ಹಾಡಿಗೆ ಇದೀಗ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ನಿರ್ದೇಶಕ ಪ್ರೇಮ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ‘ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ’ ಅನ್ನೋ ಐಟಂ ಸಾಂಗ್ ಬಿಡುಗಡೆಯಾಗಿದ್ದು, ಹಿಂದಿ ಭಾಷೆಯಲ್ಲಿಯೂ ಬಿಡುಗಡೆಯಾಗಿದೆ. ಈ ಬಗ್ಗೆ ಮಾತನಾಡಿರುವ ನಟಿ, ಬಿಜೆಪಿ ಸಂಸದೆ ಕಂಗನಾ ರನೌತ್, ಈ ಸಾಹಿತ್ಯ ಬಾಲಿವುಡ್ ನ ಹೊಸ ರೀತಿಯ ಕೀಳು ಅಭಿರುಚಿ ಹಾಗೂ ಅಶ್ಲೀಲತೆಯನ್ನು ಮೀರಿದ್ದು ಎಂದು ಕಿಡಿ ಕಾರಿದ್ದಾರೆ.
ಸಂಸತ್ ಹೊರಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕಂಗನಾ ರನೌತ್, ಕೀಳು ಅಭಿರುಚಿಯ ಮೂಲಕ ಜನರನ್ನು ಸೆಳೆಯುವ ಚೀಪ್ ಗಿಮಿಕ್. ಇಂತಹ ಹಾಡುಗಳನ್ನು ನಿಯಂತ್ರಿಸಬೇಕು. ಈ ಹಾಡನ್ನು ರಚಿಸಿದವರಿಗೆ ಯಾವುದೇ ನಾಚಿಕೆ ಆಗುವುದಿಲ್ಲವೇ ಎಂದು ವಾಗ್ದಾಳಿ ನಡೆಸಿದ್ದಾರೆ. ಕನ್ನಡದಲ್ಲಿ ಈ ಹಾಡನ್ನು ಸ್ವತಃ ನಿರ್ದೇಶಕ ಪ್ರೇಮ್ ರಚನೆ ಮಾಡಿದ್ದಾರೆ. ಹಿಂದಿಯಲ್ಲಿ ‘ಸರ್ಕೆ ಚುನರ್ ತೇರಿ ಸರ್ಕೆ’ ಇದ್ದು, ರಖೀಬ್ ಆಲಂ ಸಾಹಿತ್ಯವಿದೆ.
ಬಾಲಿವುಡ್ ನಟಿ ನೋರಾ ಫತೇಹಿ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ವಿಲನ್ ಆಗಿ ಕಾಣಿಸಿಕೊಂಡಿರುವ ಸಂಜಯ್ ದತ್ ಸಹ ಕುಣಿದಿದ್ದಾರೆ. ಈ ಹಾಡಿನ ಸಾಹಿತ್ಯಕ್ಕೆ ಕರ್ನಾಟಕದಲ್ಲಿಯೇ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ನಿರ್ದೇಶಕ ಪ್ರೇಮ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಇದರಿಂದ ಎಚ್ಚೆತ್ತುಕೊಂಡ ಈ ಸಿನಿಮಾದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಯುಟ್ಯೂಬ್ ನಲ್ಲಿ ಇದನ್ನು ತೆಗೆದು ಹಾಕಿದೆ. ಕೆಡಿ ಚಿತ್ರದಲ್ಲಿ ನಟ ಧ್ರುವ್ ಸರ್ಜಾ ನಾಯಕ ನಟನಾಗಿದ್ದು, ಬಹುದೊಡ್ಡ ತಾರಾಬಳಗವಿದೆ.




