ಪ್ರಜಾಸ್ತ್ರ ಸುದ್ದಿ
ಬಳ್ಳಾರಿ(Ballari): ಬೇಡ ಜಂಗಮ ಎಂದರೆ ಆಂಧ್ರದ ಅಲೆಮಾರಿಗಳು. ಮಾದಿಗರ ಮನೆಯಲ್ಲಿ ಬೇಡಿಕೊಂಡು ತಿನ್ನುತ್ತಿದ್ದರು. ಈಗ ಆ ಜಾತಿಯೇ ಅಸ್ತಿತ್ವದಲ್ಲಿಲ್ಲ. ಅದು ನಾಶವಾಗಿದೆ. ಆದರೆ, ಬೇಡ ಜಂಗಮ ಹೆಸರಲ್ಲಿ ಮಾದಿಗರ ತಟ್ಟೆಗೆ ಕನ್ನ ಹಾಕುವುದು ಯಾವ ನ್ಯಾಯ ಎಂದು ಕಾಂಗ್ರೆಸ್ ಮಾಜಿ ಸಚಿವ ಎಚ್.ಆಂಜನೇಯ ಪ್ರಶ್ನಿಸಿದ್ದಾರೆ. ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿಯ ಪಟ್ಟಿಯಿಂದ ಬೇಡ ಜಂಗಮ ತೆಗೆಸಿ ಹಾಕಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ವೀರಶೈವ ಲಿಂಗಾಯತರು ಪರಿಶಿಷ್ಟ ಜಾತಿಯೊಳಗೆ ಬರುತ್ತಿದ್ದಾರೆ ಎಂದು ಆರೋಪಿಸಿದರು.
ಒಂದು ಮೇಲ್ವರ್ಗದ ಜಾತಿಯೂ ಪರಿಶಿಷ್ಟರ ಮೀಸಲಾತಿಯನ್ನು ಅಪಹರಿಸುತ್ತಿದೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿಗಳಿವೆ. ಉಪಜಾತಿಗಳು ಸೇರಿ 180 ಆಗುತ್ತದೆ. 80-90 ಜಾತಿಗಳು ಅಸ್ತಿತ್ವದಲ್ಲಿಯೇ ಇರಲಿಲ್ಲ. 1931ರಲ್ಲಿ ಮಿಲ್ಲರ್ ಆಯೋಗ ಈ ಜಾತಿಗಳ ಪಟ್ಟಿ ಮಾಡಿತು. ಅದು ಈಗ ಅವಾಸ್ತವಾಗಿದೆ. ಬೇಡ ಜಂಗಮ ಪದವನ್ನೇ ಎಸ್ ಸಿ ಪಟ್ಟಿಯಿಂದ ತೆಗೆಸುತ್ತೇವೆ. ಒಳಮೀಸಲಾತಿ ಆಯೋಗಕ್ಕೆ ಪತ್ರ ಬರೆದಿದ್ದೇನೆ. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರಿಗೆ ಜೈಲು ಗ್ಯಾರೆಂಟಿ ಎಂದು ಕಿಡಿ ಕಾರಿದರು.