ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ(Shivamogga): ಕಾಂತಾರ-1 ಚಿತ್ರದ ಶೂಟಿಂಗ್ ವೇಳೆ ಅನಾಹುತ ನಡೆದಿದ್ದು, ಕಲಾವಿದರು ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ ಅನ್ನೋ ಸುದ್ದಿ ಶನಿವಾರದಿಂದಲೇ ಹರಿದಾಡುತ್ತಿದೆ. ಈ ಬಗ್ಗೆ ಚಿತ್ರ ನಿರ್ಮಾಣ ಸಂಸ್ಥೆಯಾಗಿರುವ ಹೊಂಬಾಳೆ ಫಿಲ್ಮ್ಸ್ ಸ್ಪಷ್ಟನೆ ನೀಡಿದ್ದು, ಚಿತ್ರೀಕರಣ ವೇಳೆ ಶನಿವಾರ ಯಾವುದೇ ರೀತಿಯ ಅನಾಹುತ ನಡೆದಿಲ್ಲ. ಭಾನುವಾರವೂ ಶೂಟಿಂಗ್ ನಡೆದಿದೆ. ಶನಿವಾರ ಸಂಜೆ ಸುರಿದ ಜೋರಾದ ಮಳೆ, ಗಾಳಿಗೆ ಶಿಪ್ ಸೆಟ್ ಹಾನಿಯಾಗಿದೆ ಎಂದು ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ಆದರ್ಶ ಹೇಳಿದ್ದಾರೆ.
ಹೊಸನಗರ ತಾಲೂಕಿನ ಯಡೂರು ಹತ್ತಿರದ ಕೊಪ್ಪದ ಮಾಣಿ ಹಿನ್ನೀರಿನ ಪ್ರದೇಶದಲ್ಲಿ ನಾವು ಚಿತ್ರೀಕರಣ ಮಾಡುತ್ತಿದ್ದೇವೆ. ಆದರೆ, ನೀರಿನ ಭಾಗದಲ್ಲಿ ಚಿತ್ರೀಕರಣ ಮಾಡಿಲ್ಲ. ಹೀಗಾಗಿ ಶಿಪ್ ಸೆಟ್ ನಿರ್ಮಿಸಿದ್ದೇವೆ. ಇಲ್ಲಿ ಚಿತ್ರೀಕರಣ ಮಾಡಲು ಸಂಬಂಧಿಸಿದ ಇಲಾಖೆಯಿಂದ ಪರವಾನಿಗೆ ಪಡೆದಿದ್ದೇವೆ ಎಂದು ಆದರ್ಶ ಹೇಳಿದ್ದಾರೆ. ಕಾಂತಾರ-1ರಲ್ಲಿ ನಟಿಸುತ್ತಿದ್ದ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ನಿಧನರಾದರು. ಕೇರಳ ಮೂಲದ ಕಲಾವಿದನೊಬ್ಬ ಈಜಲು ಹೋಗಿ ಮೃತಪಟ್ಟರು. ಶನಿವಾರ ಮತ್ತೊಂದು ಅನಾಹುತ ನಡೆದಿದೆ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿತ್ತು. ಅದಕ್ಕೆ ಹೊಂಬಾಳೆ ಫಿಲ್ಮ್ಸ್ ಸ್ಪಷ್ಟನೆ ನೀಡಿದೆ.