ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಿಲ್ಲೆಯ ಗ್ರಾಮೀಣ ಜನರ ಜೀವನ ಸುಧಾರಿಸುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಪರಿಹಾರ ಒದಗಿಸಲು ಹಾಗೂ ಮೂಲಸೌಲಭ್ಯಗಳನ್ನು ಆದ್ಯತೆ ಮೇಲೆ ಕಲ್ಪಿಸಲು ಕ್ರಮಕೈಗೊಳ್ಳಲು ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಗ್ರಾಮೀಣ ಭಾಗದ ಜನರು ಯಾವುದೇ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಾಮಾಜಿಕ ಕಳಕಳಿಯೊಂದಿಗೆ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು. ಗ್ರಾಮೀಣ ಭಾಗದಲ್ಲಿ ಸ್ವಚ್ಚತೆಗೆ ಪ್ರಥಮಾದ್ಯತೆ ನೀಡಬೇಕು, ನೈರ್ಮಲ್ಯೀಕರಣ ಮಹತ್ವ ತಿಳಿಸುವ ನಿಟ್ಟಿನಲ್ಲಿ ಜನರಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಡುವ ಮೂಲಕ ಬಳಕೆ ಕುರಿತು ಜಾಗೃತಿ ಮೂಡಿಸಬೇಕು. ಜನರ ಆರೋಗ್ಯ ಹಾಗೂ ಗ್ರಾಮ ನೈರ್ಮಲ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಸಂಬAಧಿಸಿದ ಅಧಿಕಾರಿಗಳು ಈ ಬಗ್ಗೆ ಅಭಿಯಾನ ಹಮ್ಮಿಕೊಳ್ಳಬೇಕು. ಆಗಾಗ ಸಭೆ ನಡೆಸಿ ಸಾರ್ವಜನಿಕರಿಗೆ ಅಗತ್ಯ ತಿಳುವಳಿಕೆ ನೀಡಬೇಕು ಎಂದು ಅವರು ತಿಳಿಸಿದರು.
ಚರಂಡಿಯ ನೀರು ಒಂದೆಡೆ ನಿಲ್ಲದೇ ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಿ, ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆಯೂ, ಸಮರ್ಥವಾಗಿ ಕಾರ್ಯ ನಿರ್ವಹಿಸಿ ಈ ವಿಷಯದಲ್ಲಿ ನಿರ್ಲಕ್ಷöವಹಿಸಬಾರದು. ಸಾರ್ವಜನಿಕರ ಕಾಳಜಿಗೆ ಆದ್ಯತೆಯಾಗಿಸಿಕೊಂಡು ಕಾರ್ಯ ನಿರ್ವಹಿಸಿ, ಈ ಕುರಿತು ತಾಲೂಕ್ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ತೀವ್ರ ನಿಗಾ ವಹಿಸುವಂತೆ ಅವರು ಸೂಚನೆ ನೀಡಿದರು.
ಜಿಲ್ಲಾಸ್ಪತ್ರೆ ಕಾರ್ಯವೈಖರಿಗೆ ಪ್ರಶಂಸೆ: ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಲೋಕಾಯುಕ್ತ ಬಿ.ಎಸ್.ಪಾಟೀಲ ಅವರು ಜಿಲ್ಲೆಯ ಜಿಲ್ಲಾ ಆಸ್ಪತ್ರೆಯ ಕಾರ್ಯವೈಖರಿ ಕುರಿತು ಪ್ರಶಂಸೆ ವ್ಯಕ್ತಪಡಿಸಿ, ಪ್ರತಿದಿನ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಕಲ್ಪಿಸುವುದೂ ಸೇರಿದಂತೆ ಆವರಣದಲ್ಲಿ ಸ್ವಚ್ಛತೆ ಕಾಪಾಡಲು ಮತ್ತಷ್ಟು ಆದ್ಯತೆ ನೀಡಬೇಕು. ಅಪೌಷ್ಟಿಕೆತಯಿಂದ ಬಳಲುತ್ತಿರುವ ಮಕ್ಕಳ ದೃಷ್ಡಿಯಿಂದ ಗುರಿ ನಿಗದಿಪಡಿಸಿಕೊಂಡು ಮಕ್ಕಳ ಆರೋಗ್ಯ ಕಾಳಜಿ ಹೊಂದಿ ಕಾರ್ಯ ನಿರ್ವಹಿಸಬೇಕು. ಜಿಲ್ಲೆಯಲ್ಲಿ 108 ಅಂಬುಲೆನ್ಸಗಳ ಸೇವೆ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕು. ದುರಸ್ತಿ ಕಾರ್ಯಗಳನ್ನು ನಿಮ್ಮ ಹಂತದಲ್ಲಿಯೇ ನಿರ್ವಹಿಸಿಕೊಂಡು ಜನರಿಗೆ ತೊಂದರೆಯಾಗದಂತೆ ನಿಗಾವಹಿಸಬೇಕು ಎಂದು ಹೇಳಿದರು. ಆರೋಗ್ಯ ಕ್ಷೇತ್ರದಲ್ಲಿ ಜಿಲ್ಲೆಗೆ ಒದಗುವ ಮೂಲಭೂತ ಸೌಲಭ್ಯ ಹಾಗೂ ಸಿಬ್ಬಂದಿ ಕೊರತೆ ತಮಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದರು. ಸಾರ್ವಜನಿಕರ ಕುಂದು-ಕೊರತೆ, ಅಹವಾಲುಗಳನ್ನು ಆಲಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳಾದ ಡಾ.ಆನಂದ ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಮಾತನಾಡಿದರು. ಸಭೆಯಲ್ಲಿ ಈ ವೇಳೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅರವಿಂದ ಹಾಗರಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಲೋಕಾಯುಕ್ತರ ಕಾರ್ಯದರ್ಶಿಗಳಾದ ಕೆ.ಶ್ರೀನಾಥ, ಕರ್ನಾಟಕ ಲೋಕಾಯುಕ್ತ ವಿಜಯಪುರ ಪೊಲೀಸ್ ಅಧೀಕ್ಷಕ ಟಿ.ಮಲ್ಲೇಶ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಲೋಕಾಯುಕ್ತ ಡಿವೈಎಸ್‌ಪಿ ಸುರೇಶ ರೆಡ್ಡಿ, ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.