ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ, ರಾಮನಗರ ಜಿಲ್ಲೆಯ ಚನ್ನಪಟ್ಟಣ, ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಬಹಿರಂಗ ಪ್ರಚಾರದ ಅಂತಿಮ ದಿನವಾದ ಇಂದು ರಾಜಕೀಯ ಪಕ್ಷಗಳ ಮತಬೇಟೆ ಭರ್ಜರಿಯಾಗಿ ನಡೆದಿದೆ.
ಶಿಗ್ಗಾವಿಯಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸೀರ್ ಅಹ್ಮದ್ ಖಾನ್ ಪಠಾಣ್, ಚನ್ನಪಟ್ಟಣದಲ್ಲಿ ಜೆಡಿಎಸ್-ಬಿಜೆಪಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ನಿಂದ ಸಿ.ಪಿ ಯೋಗೇಶ್ವರ್, ಸಂಡೂರಿನಲ್ಲಿ ಅನ್ನಪೂರ್ಣ ತುಕಾರಂ ಕಾಂಗ್ರೆಸ್ ನಿಂದ, ಬಂಗಾರು ಹನಮಂತ ಬಿಜೆಪಿ-ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಈ ಬಾರಿಯ ಉಪ ಕದನದಲ್ಲಿ ರಾಷ್ಟ್ರೀಯ ನಾಯಕರು ಕಾಣಿಸಿಕೊಂಡಿಲ್ಲ. ಕಾಂಗ್ರೆಸ್, ಬಿಜೆಪಿ ರಾಷ್ಟ್ರೀಯ ನಾಯಕರು ಮಹಾರಾಷ್ಟ್ರ ಜಾರ್ಖಂಡ್ ವಿಧಾನಸಭಾ ಚುನಾವಣೆ, ಕೇರಳನ ವೈಯನಾಡು ಲೋಕಸಭಾ ಉಪ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ರಾಜ್ಯ ನಾಯಕರ ಮೇಲೆಯೇ ಪ್ರಚಾರದ ಸಂಪೂರ್ಣ ಜವಾಬ್ದಾರಿ ಬಿದ್ದಿದೆ. ಮೂರು ಕ್ಷೇತ್ರಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಆಡಳಿತ ಪಕ್ಷ ಕಾಂಗ್ರೆಸ್ ಗೆ ಪ್ರತಿಷ್ಠೆಯ ಜೊತೆಗೆ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವುದಾಗಿದೆ. ಎನ್ ಡಿಎ ಬಳಗಕ್ಕೆ ಮೂರರಲ್ಲಿಯೂ ಗೆದ್ದು ವಿಧಾನಸಭಾ ಸೋಲಿನ ಸೇಡು ತೀರಿಸಿಕೊಳ್ಳುವ ತವಕವಿದೆ. ನವೆಂಬರ್ 13ರಂದು ಮತದಾನ ನಡೆಯಲಿದೆ. ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ. ಅಂದೇ ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣೆಯ ಫಲಿತಾಂಶ ಸಹ ಪ್ರಕಟವಾಗಲಿದೆ.