ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ನವೆಂಬರ್ 23, ಶನಿವಾರ ದೇಶದೆಲ್ಲೆಡೆ ಚುನಾವಣೆಯ ಫಲಿತಾಂಶದ ಕುತೂಹಲ ಮೂಡಿಸಿದೆ. ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭೆಯ ಜೊತೆಗೆ ಕರ್ನಾಟಕದ 3 ವಿಧಾನಸಭೆ ಉಪ ಚುನಾವಣೆ ಸೇರಿ ದೇಶದ ಬೇರೆ ಬೇರೆ ರಾಜ್ಯಗಳ 48 ಕ್ಷೇತ್ರಗಳು ಸೇರಿದಂತೆ 2 ಲೋಕಸಭಾ ಚುನಾವಣೆಯ ಫಲಿತಾಂಶ ನಾಳೆ ಪ್ರಕಟವಾಗಲಿದೆ. ಹೀಗಾಗಿ ಒಂದು ರೀತಿಯಿಂದ ದೇಶದ ತುಂಬಾ ಫಲಿತಾಂಶದ ಬಗ್ಗೆ ಚರ್ಚೆ ನಡೆಯುತ್ತಿದೆ.
ಇನ್ನು ಕರ್ನಾಟಕ ಉಪ ಚುನಾವಣೆ ವಿಚಾರಕ್ಕೆ ಬಂದರೆ ಕಾಂಗ್ರೆಸ್ ಹಾಗೂ ಎನ್ ಡಿಎ ಮೈತ್ರಿ ನಡುವೆ ನೇರ ಫೈಟ್ ಇದೆ. ಆದರೆ, ಇದೊಂದು ರೀತಿಯಲ್ಲಿ ಕುಟುಂಬ ಚುನಾವಣೆ ಎಂದು ಹೇಳಬಹುದು. ಯಾಕಂದರೆ, ಶಿಗ್ಗಾವಿಯಲ್ಲಿ ಬಸವರಾಜ್ ಬೊಮ್ಮಾಯಿ ರಾಜೀನಾಮೆ ನೀಡಿದ ಸ್ಥಾನಕ್ಕೆ ಅವರ ಪುತ್ರ ಭರತ್ ಬೊಮ್ಮಾಯಿ ಬಿಜೆಪಿಯಿಂದ, ಸಂಡೂರಿನಲ್ಲಿ ಕಾಂಗ್ರೆಸ್ ನ ಇ.ತುಕಾರಂ ರಾಜೀನಾಮೆ ನೀಡಿದ ಸ್ಥಾನಕ್ಕೆ ಪತ್ನಿ ಅನ್ನಪೂರ್ಣ ತುಕಾರಂ ಸ್ಪರ್ಧಿಸಿದ್ದಾರೆ. ಚನ್ನಪಟ್ಟಣದಲ್ಲಿ ಹೆಚ್.ಡಿ ಕುಮಾರಸ್ವಾಮಿ ರಾಜೀನಾಮೆ ನೀಡಿದ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಕಣದಲ್ಲಿದ್ದಾರೆ.
ಶಿಗ್ಗಾವಿಯಲ್ಲಿ ಬಿಜೆಪಿಯಿಂದ ಭರತ್ ಬೊಮ್ಮಾಯಿ, ಕಾಂಗ್ರೆಸ್ ನಿಂದ ಯಾಸೀರ್ ಖಾನ್ ಪಠಾಣ್, ಸಂಡೂರಿನಲ್ಲಿ ಬಿಜೆಪಿಯಿಂದ ಹನಮಂತು ಬಂಗಾರು, ಕಾಂಗ್ರೆಸ್ ನಿಂದ ಅನ್ನಪೂರ್ಣ ತುಕಾರಂ ಹಾಗೂ ಚನ್ನಪಟ್ಟಣದಲ್ಲಿ ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ನಿಂದ ಸಿ.ಪಿ ಯೋಗೇಶ್ವರ್ ನಡುವೆ ನೇರಾನೇರ ಸ್ಪರ್ಧೆಯಿದೆ. ಆಡಳಿತರೂಢ ಪಕ್ಷ ಕಾಂಗ್ರೆಸ್ಸಿಗೆ ಈ ಗೆಲುವು ಪ್ರತಿಷ್ಠೆಯ ಜೊತೆಗೆ ಸ್ಥಾನ ಹೆಚ್ಚಿಸಿಕೊಳ್ಳಬೇಕು ಎನ್ನುವುದರ ಜೊತೆಗೆ ಕೆಲ ನಾಯಕರ ಮುಂದಿನ ರಾಜಕೀಯ ಭವಿಷ್ಯವಿದೆ. ಬಿಜೆಪಿ ಹಾಗೂ ಜೆಡಿಎಸ್ ಗೆ ಸಾರ್ವತ್ರಿಕ ಚುನಾವಣೆಯ ಸೋಲಿಗೆ ಉತ್ತರ ಕೊಡುವ ಜಿದ್ದು ಇದೆ.
ಚನ್ನಪಟ್ಟಣದಲ್ಲಿ ಹಿರಿಯ ನಾಯಕ, ಮಾಜಿ ಸಚಿವ ಸಿಪಿವೈಗೆ ಈ ಚುನಾವಣೆ ರಾಜಕೀಯ ಭವಿಷ್ಯ, ಒಂದು ವಿಧಾನಸಭೆ, ಒಂದು ಲೋಕಸಭೆ ಸೇರಿ 2 ಬಾರಿ ಸೋತಿರುವ ನಿಖಿಲ್ ಕುಮಾರಸ್ವಾಮಿಗೂ ರಾಜಕೀಯ ನೆಲೆ ಕಂಡುಕೊಳ್ಳುವ ತವಕವಿದೆ. ಶಿಗ್ಗಾವಿಯಲ್ಲಿ ಹಿರಿಯ ನಾಯಕ ಯಾಸೀರ್ ಖಾನ್ ಪಠಾಣ್ ಹಾಗೂ ಹೊಸಬ ಭರತ್ ಬೊಮ್ಮಾಯಿ ರಾಜಕೀಯ ಹಾದಿ ಗೆಲುವು-ಸೋಲಿನ ಮೇಲೆ ನಿಂತಿದೆ. ಇನ್ನು ಬಳ್ಳಾರಿಯ ಸಂಡೂರಿನಲ್ಲಿ ರೆಡ್ಡಿಯ ಪಡೆಯಿರುವ ಬಿಜೆಪಿಯ ಹನುಮಂತು ಬಂಗಾರು ಹಾಗೂ ಕಾಂಗ್ರೆಸ್ ನಿಂದ ಅನ್ನಪೂರ್ಣ ತುಕಾರಂ ನಡುವಿನ ಫೈಟ್ ಯಾರಿಗೆ ಗೆಲುವಾದರೂ ಇಬ್ಬರಿಗೂ ಹೊಸ ಅವಕಾಶಗಳು ದೊರೆಯಲಿವೆ. ಈ ಮೂರು ಕ್ಷೇತ್ರಗಳಲ್ಲಿ ರಾಜಕೀಯ ಕುಟುಂಬದವರೆ ಸ್ಪರ್ಧಿಸಿದ್ದು, ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಮುಖಂಡರಿಗೆ ಅವಕಾಶ ಎನ್ನುವುದು ಮಾತಿಗಷ್ಟೇ ಸಿಮೀತ ಎನ್ನುವುದು ಮತ್ತೊಮ್ಮೆ ಸಾಬೀತಾಗಿರುವುದು ಸತ್ಯ.