ವಾರಣಾಸಿಯ ಗಂಗಾ ಆರತಿ ಮಾದರಿಯಲ್ಲೇ ಕಾವೇರಿ ಆರತಿ ಪ್ರಾರಂಭಿಸುವ ಆಲೋಚನೆ ನಡೆಸಿದ್ದೇವೆ ಕೊಡಗು, ಮೈಸೂರು ಹಾಗೂ ಕಾವೇರಿ ಪ್ರದೇಶದ ಶಾಸಕರು ಹಾಗು ಅಧಿಕಾರಿಗಳು ಸೇರಿದ 20 ಜನರ ಸಮಿತಿಯನ್ನು ರಚನೆ ಮಾಡಿ, ವಾರಣಾಸಿಯಲ್ಲಿ ನಡೆಯುವ ಗಂಗಾ ಆರತಿ ಹೇಗೆ ನಡೆಯುತ್ತದೆ ಎನ್ನುವ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಇಂದು ಕೆಆರ್‌ಎಸ್ ಡ್ಯಾಂಎ ಭೇಟಿ ನೀಡಿ ವೀಕ್ಷಣೆ ನಡೆಸಿದ ಡಿಸಿಎಂ ಡಿಕೆಶಿ ಕಾವೇರಿ ಬೃಂದಾವನ ಪಾರ್ಕ್ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಹೇಳಿದರು. ಕಾವೇರಿ ಬೃಂದಾವನ ಅಮ್ಯೂಸ್ ಮೆಂಟ್ ಉದ್ಯಾನಕ್ಕೆ ಹೊಸ ರೂಪ ನೀಡಲಾಗುವುದು. ಪಿಪಿಪಿ ಮಾದರಿಯಲ್ಲಿ ಇದರ ಅಭಿವೃದ್ದಿ ಮಾಡಲಾಗುವುದು. ಈ ವಿಚಾರ ಇನ್ನೆರಡು ದಿನಗಳಲ್ಲಿ ಕ್ಯಾಬಿನೆಟ್ ಮುಂದೆ ಚರ್ಚೆಗೆ ಬರುತ್ತದೆ. ಈ ಯೋಜನೆಯಿಂದ ಈ ಭಾಗದ 8-10 ಸಾವಿರ ಜನರಿಗೆ ಉದ್ಯೋಗ ಲಭಿಸಲಿದೆ. ಕಳೆದ ಬಜೆಟ್ ನಲ್ಲಿ ಯೋಜನೆ ರೂಪಿಸಲಾಗಿತ್ತು. ಕಾರ್ಯರೂಪಕ್ಕೆ ಬಂದಿರಲಿಲ್ಲ. ಸುಮಾರು 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ದಿನಕ್ಕೆ ಬರುವ ನಿರೀಕ್ಷೆಯಿದೆ. ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡಬೇಕು ಎಂದರು.
ಅಮ್ಯೂಸ್ ಮೆಂಟ್ ಪಾರ್ಕ್‌ಗಾಗಿ ಯಾರನ್ನೂ ಒಕ್ಕಲೆಬ್ಬಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈಗ ಇರುವ ಜಮೀನಿನಲ್ಲೆ ಯೋಜನೆ ಮಾಡಲಾಗುವುದು. ಸುರಕ್ಷತೆಯ ದೃಷ್ಟಿಯಿಂದ ಮಧ್ಯದಲ್ಲಿ ಯಾವುದಾದರೂ ಭೂಮಿ ಇದ್ದರೆ ಅದನ್ನು ಪಡೆಯಲಾಗುವುದು. ತಾಂತ್ರಿಕ ಸಮಿತಿ ವರದಿಯ ನಂತರ ತೀರ್ಮಾನ ಮಾಡಲಾಗುವುದು. ಡ್ಯಾಂ ಸುರಕ್ಷತೆಯ ದೃಷ್ಟಿಯಿಂದ ಟ್ರಯಲ್ ಬ್ಲಾಸ್ಟ್ ನಿಲ್ಲಿಸಲಾಗುವುದು. ಅಣೆಕಟ್ಟಿನ ಸುರಕ್ಷತೆಯ ದೃಷ್ಟಿಯಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ನಮಗೆ ಎಲ್ಲಿ ಬೇಕಾದರೂ ಕಲ್ಲು ಸಿಗುತ್ತದೆ. ಡ್ಯಾಂ ಮತ್ತೆ ಸಿಗುವುದಿಲ್ಲ. ಜಿಲ್ಲಾ ಸಚಿವರು ಮುಖ್ಯಮಂತ್ರಿಗಳ ಗಮನಕ್ಕೆ ಅನೇಕ ವಿಚಾರಗಳನ್ನು ತಂದಿದ್ದಾರೆ ಎಂದರು.
ಸದ್ಯಕ್ಕೆ ಮೇಕೆದಾಟು ಯೋಜನೆ ಬಗ್ಗೆ ಉತ್ತರ ನೀಡುವುದಿಲ್ಲ. ಕಾಲವೇ ಅದಕ್ಕೆ ಉತ್ತರ ಕೊಡುತ್ತದೆ. ನಾವು ಸಲ್ಲಿಸಿರುವ ದಾಖಲೆಗಳು ಈ ಯೋಜನೆಗೆ ಭದ್ರ ಅಡಿಪಾಯ ಹಾಕಿದ್ದು, ನ್ಯಾಯಾಲಯವೇ ಈ ವಿಚಾರವಾಗಿ ತೀರ್ಮಾನ ಮಾಡಲಿದೆ” ಎಂದರು. ವಿಧಾನಸಭೆ ಮುಗಿದ ನಂತರ ಬಾಗಿನ ಅರ್ಪಣೆಗೆ ದಿನಾಂಕ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು. ಬಿಳಿಗುಂಡ್ಲುವಿನಲ್ಲಿ ದಾಖಲಾದಂತೆ ಇದುವರೆಗು ತಮಿಳುನಾಡಿಗೆ 30 ಟಿಎಂಸಿ ನೀರನ್ನು ಹರಿಸಲಾಗಿದೆ. 10 ಟಿಎಂಸಿ ನೀರನ್ನು ಹರಿಸಿದರೆ ಸಾಮಾನ್ಯ ವರ್ಷದಲ್ಲಿ 40 ಟಿಎಂಸಿ ನೀರು ಹರಿಸಿದಂತಾಗುತ್ತದೆ. ನಿತ್ಯ 51 ಸಾವಿರ ಕ್ಯೂಸೆಕ್ಸ್ ನೀರನ್ನು ಕಾವೇರಿ ಜಲಾನಯನ ಪ್ರದೇಶದಿಂದ ಹರಿಸಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.