ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ಸಚಿವರ, ಕಾಂಗ್ರೆಸ್ ನಾಯಕರ ಸಭೆ ನಡೆಸಲಾಗಿದೆ. ಮುಡಾ, ವಾಲ್ಮೀಕಿ ನಿಗಮದ ಪ್ರಕರಣಗಳನ್ನಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ(Siddaramaih) ಹಾಗೂ ಸರ್ಕಾರದ ವಿರುದ್ಧ ಪಾದಯಾತ್ರೆ ನಡೆಸಿರುವ ಬಿಜೆಪಿ, ಜೆಡಿಎಸ್ ನಾಯಕರನ್ನು ಕಟ್ಟಿ ಹಾಕುವ ಸಂಬಂಧ ಚರ್ಚೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಸಭೆಯ ಬಳಿಕ ಮಾತನಾಡಿದ ಎಐಸಿಸಿ(AICC) ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಳ, ಬಿಜೆಪಿ, ಜೆಡಿಎಸ್ ಪಿತೂರಿಗೆ ನಾವು ಬಗ್ಗಲ್ಲ. ನಾವು ಜನರ ಹತ್ತಿರ ಹೋಗುತ್ತೇವೆ. ವಾಸ್ತವಾಂಶ ವಿವರಿಸುತ್ತೇವೆ. ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದರು.
ಕರ್ನಾಟಕ ಬಿಜೆಪಿಯು(BJP) ಸರ್ಕಾರಗಳನ್ನು ಉರುಳಿಸುವ ಇತಿಹಾಸ ಹೊಂದಿದೆ. 2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಉರುಳಿಸಿದ್ದೇ ಬಿಜೆಪಿ. ಅದೇ ಉದ್ದೇಶ ಈಗ ಇಟ್ಟುಕೊಂಡಿದೆ. ಕಾಂಗ್ರೆಸ್ ಗುರಿಯಾಗಿಸಿಕೊಂಡು, ತಮ್ಮ ಪಕ್ಷ ಉಳಿಸಿಕೊಳ್ಳಲು ಈ ರೀತಿ ಮಾಡಲಾಗುತ್ತಿದೆ. ಪ್ರಜ್ವಲ್ ಪ್ರಕರಣ ಬೆಳಕಿಗೆ ಬಂದಾಗಲೇ ಕಾಂಗ್ರೆಸ್ ಸರ್ಕಾರದ ವಿರುದ್ಧದ ಪಿತೂರಿ ಇಡೀ ದೇಶ ಗಮನಿಸಿದೆ. ಎಲ್ಲರಿಗೂ ಸಿದ್ದರಾಮಯ್ಯನವರ ಪ್ರಮಾಣಿಕತೆ ಅರಿವಿದೆ. ಮುಖ್ಯಮಂತ್ರಿ ಪದವಿಗೆ ಅವರು ಹೊಸಬರಲ್ಲ. ರಾಜಕೀಯ ಬದುಕು, ತತ್ವ, ಸಿದ್ಧಾಂತಗಳಿಗೆ ಹಿಂದೆ ಹೇಗೆ ಇದ್ದರೂ ಈಗಲೂ ಹಾಗೇ ಇದ್ದಾರೆ. ಅವರ ವಿರುದ್ಧ ಕೆಲ ಆರೋಪಗಳನ್ನು ಮಾಡುವ ಮೂಲಕ ಸರ್ಕಾರ ಅಸ್ಥಿತರಗೊಳಿಸುವ ಪತೂರಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್(Congress) ಬಡವರ ಪರವಾಗಿದೆ. ಆದ್ದರಿಂದಲೇ 135 ಸೀಟುಗಳೊಂದಿಗೆ ಗೆದ್ದು ಅಧಿಕಾರಕ್ಕೆ ಬಂದಿದ್ದೇವೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಾಡಿರುವ ತರತಮ್ಯದ ಕುರಿತು ಯಾರೂ ಮಾತನಾಡುತ್ತಿಲ್ಲ. ನಿರ್ಮಲಾ ಸೀತಾರಾಮನ್ ಇಲ್ಲಿಂದಲೇ ಆಯ್ಕೆ ಆಗಿದ್ದರೂ ಯಾವುದೇ ನೆರವು ನೀಡಿಲ್ಲ. ಸೀಮಿತ ಸಂಪನ್ಮೂಲಗಳೊಂದಿಗೆ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಕೇಂದ್ರ ಸರ್ಕಾರ ಬೆಂಬಲ ನೀಡುವ ಬದಲು ಅಸ್ಥಿರಗೊಳಿಸಲು ಹೊರಟಿದೆ. ಇದರ ವಿರುದ್ಧ ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ್ ಉಪಸ್ಥಿತರಿದ್ದರು.