ಪ್ರಜಾಸ್ತ್ರ ಸುದ್ದಿ
ಐಟಂ ಸಾಂಗ್ ನ ಸಾಹಿತ್ಯದಿಂದ ಇತ್ತೀಚೆಗೆ ಸಾಕಷ್ಟು ವಿವಾದ ಸೃಷ್ಟಿಸಿರುವ ಕಿಡಿ ಚಿತ್ರದ ಅಡ್ಡಕ್ಕೆ ನಟ ಕಿಚ್ಚ ಸುದೀಪ್ ಎಂಟ್ರಿಯಾಗಿದೆ. ಈ ಬಗ್ಗೆ ನಿರ್ದೇಶಕ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಹೊಸ ಅಪ್ ಡೇಟ್ ಕೊಟ್ಟಿದ್ದಾರೆ. ಬಾದ್ ಷಾ ಸುದೀಪ್ ಕಾಲ ಭೈರವ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೈಯಲ್ಲಿ ರುದ್ರಾಕ್ಷಿ ಹಿಡಿದುಕೊಂಡು ಹಿಮ್ಮುಖವಾಗಿ ನಿಂತಿರುವ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಕೆಲವು ಹೆಸರುಗಳು ಆತಂಕ ಮೂಡಿಸಿದರೆ ಈ ಹೆಸರು ತಬ್ಬಿಬ್ಬಾಗಿಸುತ್ತದೆ. ನನ್ನ ಡಾರ್ಲಿಂಗ್ ಕಾಲ ಭೈರವ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಪ್ರೇಮ್ ಬರೆದುಕೊಂಡಿದ್ದಾರೆ. ನಟ ಧ್ರುವ್ ಸರ್ಜಾ ಮುಖ್ಯಭೂಮಿಕೆಯ ಚಿತ್ರದಲ್ಲಿ ನಟರಾದ ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ನಟಿಯರಾದ ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ, ನೂರ್ ಫತೇಹಿ ಸೇರಿದಂತೆ ಬಹುದೊಡ್ಡ ತಾರಾ ಬಳಗವಿದೆ. ಈಗ ಸುದೀಪ್ ನಟಿಸುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಏಪ್ರಿಲ್ 30ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.




