ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಭಾನುವಾರ ರಾತ್ರಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸುವ ಮೂಲಕ ಹಿಂದಿನ ಸೋಲಿನ ಸೇಡು ತೀರಿಸಿಕೊಂಡಿತು. ಟಾಸ್ ಗೆದ್ದಿದ್ದ ಆರ್ ಸಿಬಿ ನಾಯಕ ರಜತ್ ಪಟೀದಾರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಭುವನೇಶ್ವರ್ ಕುಮಾರ್ ಭರ್ಜರಿ ಬೌಲಿಂಗ್ ಹಾಗೂ ಸಾಥ್ ನೀಡಿದ ಹಜಲ್ ವುಡ್ ನಿಂದಾಗಿ ಡೆಲ್ಲಿಯನ್ನು 162 ರನ್ ಗಳಿಗೆ ಕಟ್ಟಿ ಹಾಕಲಾಯಿತು.
ಕೆ.ಎಲ್ ರಾಹುಲ್ 42 ರನ್, ಸ್ಟಬ್ಸ್ 34 ರನ್ ಹಾಗೂ ಅಭಿಷೇಕ್ ಪೊರೆಲ್ 28 ರನ್ ಗಳಿಂದಾಗಿ 8 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಆರ್ ಸಿಬಿ ಪರ ಭುವನೇಶ್ವರ್ ಕುಮಾರ್ 3, ಹಜಲ್ ವುಡ್ 2 ವಿಕೆಟ್ ಪಡೆದು ಮಿಂಚಿದರು. ಯಶ್ ದಯಾಳ್ ಹಾಗೂ ಕೃನಾಲ್ ಪಾಂಡ್ಯ ತಲಾ 1 ವಿಕೆಟ್ ಪಡೆದರು.
ಅಲ್ಪ ಮುನ್ನಡೆಯ ಗುರಿಯನ್ನು ಬೆನ್ನು ಹತ್ತಿದ ಆರ್ ಸಿಬಿ ಆರಂಭದಲ್ಲಿ ಜೇಕಬ್ ಬೇತೆಲ್ 12 ರನ್ ವಿಕೆಟ್ ಕಳೆದುಕೊಂಡಿತು. ಪಡಿಕಲ್ ಡಕೌಟ್, ನಾಯಕ ಪಟೀದಾರ್ ಕೇವಲ 6 ರನ್ ಗಳಿಸಿ ನಿರಾಸೆ ಮೂಡಿಸಿದರು. ಆದರೆ, ಒಂದು ಕಡೆ ವಿರಾಟ್ ಕೊಹ್ಲಿ ಗಟ್ಟಿಯಾಗಿ ನಿಂತಿದ್ದರು. ಮತ್ತೊಂದು ಕಡೆ ಕೃನಾಲ್ ಪಾಂಡ್ಯ ಭರ್ಜರಿ ಬ್ಯಾಟ್ ಬೀಸಿದರು. ಕೊಹ್ಲಿ 51 ರನ್ ಗೆ ಔಟ್ ಆದರು. ಪಾಂಡ್ಯೆ 4 ಸಿಕ್ಸ್, 5 ಫೋರ್ ಗಳ ಬಳಿಕ ಅಜೇಯ 73 ರನ್ ಗಳಿಸಿದರು. ಟಿಮ್ ಡೇವಿಡ್ ಅಜೇಯ 19 ರನ್ ಗಳಿಸಿದರು. ಅಂತಿಮವಾಗಿ 18.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಏಪ್ರಿಲ್ 10ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್ ಸಿಬಿ ಹಾಗೂ ಡಿಸಿ ನಡುವಿನ ಪಂದ್ಯದಲ್ಲಿ ಡೆಲ್ಲಿ ತಂಡ ಗೆಲುವು ದಾಖಲಿಸಿತು. ಆ ತಂಡದ ಆಟಗಾರ ಕೆ.ಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಮಾಡಿ ಅಜೇಯರಾಗಿ ಉಳಿದಿದ್ದರು. ಕೊನೆಯಲ್ಲಿ ಅವರು ಇದು ನನ್ನ ಮೈದಾನ ಎನ್ನುವ ರೀತಿಯಲ್ಲಿ ಸ್ಟೈಲ್ ತೋರಿಸಿದ್ದರು. ಭಾನುವಾರ ಸಂಜೆ ದೆಹಲಿಯಲ್ಲಿ ಡೆಲ್ಲಿ ತಂಡವನ್ನು ಸೋಲಿಸಿದ ಆರ್ ಸಿಬಿ ಸೇಡು ತೀರಿಸಿಕೊಂಡಿತು. ಕೊನೆಯಲ್ಲಿ ಕೊಹ್ಲಿ ರಾಹುಲ್ ಎದುರು ಹೋಗಿ ವೃತ್ತ ಬರೆದು ಇದು ನನ್ನ ಮೈದಾನ ಎಂದು ಕಾಲೆಳೆದರು. ಇದಕ್ಕೆ ಸಾಕಷ್ಟು ಮಿಮ್ಸ್ ಗಳು ಹರಿದಾಡುತ್ತಿವೆ. ಕೊಹ್ಲಿ ದೆಹಲಿ ಮೂಲದವರಾಗಿದ್ದಾರೆ.
ಈ ಗೆಲುವಿನಿಂದಿಗೆ ಆರ್ ಸಿಬಿ 10 ಪಂದ್ಯಗಳಲ್ಲಿ 7 ರಲ್ಲಿ ಗೆದ್ದು 14 ಪಾಯಿಂಟ್ ಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ಗುಜರಾತ್ ಟೈಟಾನ್ಸ್ 8 ಪಂದ್ಯಗಳಿಂದ 12 ಅಂಕ ಗಳಿಸಿ 2ನೇ ಸ್ಥಾನ, ಮುಂಬೈ ಇಂಡಿಯನ್ಸ್ ಸತತ 5 ಪಂದ್ಯಗಳನ್ನು ಗೆದ್ದು 10 ಪಂದ್ಯಗಳಿಂದ 12 ಅಂಕ ಗಳಿಸಿ 3ನೇ ಸ್ಥಾನಕ್ಕೆ ಬಂದಿದೆ. ಡಿಸಿ 9 ಪಂದ್ಯ 12 ಅಂಕ ಪಡೆದು 4ನೇ ಸ್ಥಾನ, ಪಂಜಾಬ್ 9 ಪಂದ್ಯ 11 ಅಂಕಗಳಿಂದ 5ನೇ ಸ್ಥಾನದಲ್ಲಿದೆ. ಚೆನ್ನೈ 9 ಪಂದ್ಯಗಳಲ್ಲಿ 2ರಲ್ಲಿ ಗೆದ್ದು 4 ಅಂಕಗಳೊಂದಿಗೆ 10 ಸ್ಥಾನದಲ್ಲಿದೆ.