ಪ್ರಜಾಸ್ತ್ರ ಸುದ್ದಿ
ಕೋಲಾರ: ಏಷ್ಯಾದಲ್ಲಿಯೇ 2ನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆಯಾಗಿರುವುದು ಕೋಲಾರ ಎಪಿಎಂಸಿ. ಇಲ್ಲಿನ ಮಂಡಿ ವರ್ತಕರು, ರೈತರು ಇದೀಗ ಒಂದು ನಿರ್ಧಾರಕ್ಕೆ ಬಂದಿದ್ದು, ಇನ್ಮುಂದೆ ಪಾಕಿಸ್ತಾನಕ್ಕೆ ಟೊಮೆಟೊ ಪೂರೈಕೆ ಮಾಡದಿರಲು ಮುಂದಾಗಿದ್ದಾರೆ. ಪಹಲ್ಗಾಮ್ ನಲ್ಲಿ ನಡೆದ ದಾಳಿಯಿಂದ ಪಾಕ್ ವಿರುದ್ಧ ಸಮರ ಸಾರಲು ತೀರ್ಮಾನಿಸಿದ್ದಾರೆ. ಟೊಮೆಟೊ ಹಾಗೂ ಮಾವಿನ ರಫ್ತು ನಿಲ್ಲಿಸುವುದಾಗಿ ಹೇಳಿದ್ದಾರೆ.
ಪ್ರತಿ ವರ್ಷ ಸುಗ್ಗಿಯ ಸಂದರ್ಭದಲ್ಲಿ ಇಲ್ಲಿನ ಟೊಮೆಟೊ, ಮಾವು ನೆರೆಯ ಬಾಂಗ್ಲಾ, ನೇಪಾಳ, ಪಾಕಿಸ್ತಾನ ಹಾಗೂ ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ರಫ್ತು ಮಾಡಲಾಗುತ್ತೆ. 2016ರಲ್ಲಿ ಉರಿ ಹಾಗೂ 2019ರಲ್ಲಿ ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ಬಳಿಕ ಪಾಕಿಸ್ತಾನಕ್ಕೆ ಟೊಮೆಟೊ ರಫ್ತು ನಿಲ್ಲಿಸಲಾಗಿತ್ತು. ಆಗ ಪಾಕಿಸ್ತಾನದಲ್ಲಿ ಒಂದು ಕೆಜಿ ಟೊಮೆಟೊ 300 ರೂಪಾಯಿ ಆಗಿತ್ತು. ಕೋಲಾರ ಎಪಿಎಂಸಿಯಿಂದ ನೇರವಾಗಿ ರಫ್ತು ಹೋಗದಿದ್ದರೂ ಉತ್ತರ ಭಾರತದ ಬೇರೆ ರಾಜ್ಯದವರು, ಮಹಾರಾಷ್ಟ್ರದ ದಲ್ಲಾಳಿಗಳು ಪಾಕಿಸ್ತಾನಕ್ಕೆ ಸಾಗಾಟ ಮಾಡುತ್ತಾರೆ.
ಇನ್ಮುಂದೆ ಶಾಶ್ವತವಾಗಿ ಪಾಕಿಸ್ತಾನಕ್ಕೆ ಟೊಮೆಟೊ ಹಾಗೂ ಮಾವು ರಫ್ತು ಮಾಡುವುದನ್ನು ನಿಲ್ಲಿಸಲಾಗುವುದು ಎಂದು ಕೋಲಾರ ಎಪಿಎಂಸಿ ಮಂಡಿ ವರ್ತಕರು, ರೈತರು ನಿರ್ಧರಿಸಿದ್ದಾರಂತೆ. ಪಹಲ್ಗಾಮ್ ದಾಳಿಯಿಂದ ತುಂಬಾ ನೊಂದು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದ್ದು, ಅಲ್ಲಿನ ಪರಿಸ್ಥಿತಿ ಏನಾಗುತ್ತೋ ಕಾದು ನೋಡಬೇಕು.