ಪ್ರಜಾಸ್ತ್ರ ಸುದ್ದಿ
ಕೋಲ್ಕತ್ತಾ(Kolkata): ಸರ್ಕಾರಿ ಸ್ವಾಮ್ಯದ ಆರ್.ಜೆ ಕಾರ್ ವೈದ್ಯಕೀಯ ವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ(Rape and Murder Case) ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ಗುರುವಾರ ವಿಚಾರಣೆ ನಡೆಸಿತು. ಪಶ್ಚಿಮ ಬಂಗಳಾ ಸರ್ಕಾರ ಹಾಗೂ ಸಿಬಿಐ ಸಲ್ಲಿಸಿದ ವರದಿಯನ್ನು ಪರಿಶೀಲನೆ ನಡೆಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ವಿಳಂಬ, ಮರಣೋತ್ತರ ಪರೀಕ್ಷೆಯ ವಿಧಾನ ಸೇರಿದಂತೆ ಹಲವು ಅಂಶಗಳ ಬಗ್ಗೆ ಸಂದೇಹ ಮೂಡಿರುವ ಬಗ್ಗೆ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ(CJI) ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ, ಜೆ.ಬಿ ಪರ್ದಿವಾಲಾ ಅವರಿದ್ದ ಪೀಠ ವಿಚಾರಣೆ ನಡೆಸಿತು. ಪ್ರತಿಭಟನೆಯಲ್ಲಿ ತೊಡಗಿರುವವರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಮುಂದಿನ ವಿಚಾರಣೆಗೆ ಹಾಜರಾಗುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಪೊಲೀಸರು ಮೊದಲು ಸಂತ್ರಸ್ತೆಯ ಹೆತ್ತವರಿಗೆ ಇದು ಆತ್ಮಹತ್ಯೆ ಎಂದು ತಿಳಿಸಿದ್ದರು. ನಂತರ ಕೊಲೆ ಎಂದು ಒಪ್ಪಿಕೊಂಡಿದ್ದಾರೆ. ಸಂತ್ರಸ್ತೆಯ ಸ್ನೇಹಿತ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದ ಎಂದು ಸಿಬಿಐ(CBI) ಹೇಳಿದೆ. ಹೀಗಾಗಿ ಮುಂದಿನ ಬೆಳವಣಿಗೆ ಬಗ್ಗೆ ಪಾರದರ್ಶಕತೆ ಸಲುವಾಗಿ ವಿಡಿಯೋಗ್ರಫಿಗೆ ಸೂಚಿಸಿದೆ.
ಅಧಿಕೃತವಾಗಿ ಅಸಹಜ ಸಾವು ಎಂದು ದಾಖಲಿಸುವ ಮೊದಲು ಮರಣೋತ್ತರ ಪರೀಕ್ಷೆ ನಡೆಸಲಾಯಿತು ಎಂದು ಪೊಲೀಸ್ ವರದಿಯಲ್ಲಿ ತಿಳಿಸಲಾಗಿದೆ. ಇದು ತೀವ್ರ ಗೊಂದಲ ಉಂಟು ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಸಂತಸ್ತೆಯ ಅಂತ್ಯಸಂಸ್ಕಾರ ನಡೆಸಿದ ಬಳಿಕ ರಾತ್ರಿ 11.45ಕ್ಕೆ ಎಫ್ಐಆರ್(FIR) ದಾಖಲಿಸಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರ್ಟಿಗೆ ತಿಳಿಸಿದ್ದಾರೆ. ಹೀಗಾಗಿ ಈ ಬಗ್ಗೆ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.




