ಪ್ರಜಾಸ್ತ್ರ ಸುದ್ದಿ
ಚನ್ನಪಟ್ಟಣ(Channapattana): ರಾಜ್ಯ ರಾಜಕೀಯ ಒಂದು ಕಡೆಯಾದರೆ, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ(HDK) ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನಡುವಿನ ಆರೋಪ, ಪತ್ಯಾರೋಪ ಮತ್ತೊಂದು ಕಡೆ. ಇಬ್ಬರು ನಾಯಕರು ಒಬ್ಬರಿಗೊಬ್ಬರು ಆರೋಪಗಳ ಸುರಿಮಳೆ ಮಾಡುತ್ತಿದ್ದಾರೆ. ಬಿಡದಿಯಲ್ಲೊಬ್ಬರು ಆರೋಪ ಮಾಡಿದರೆ ಚನ್ನಪಟ್ಟಣದಲ್ಲಿ ಮತ್ತೊಬ್ಬರು ಆರೋಪ ಮಾಡುತ್ತಾರೆ. ಹೀಗಾಗಿ ಬಿಜೆಪಿ-ಜೆಡಿಎಸ್ ಪಾದಯಾತ್ರೆ, ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಟೀಕಾಸ್ತ್ರಗಳು ಜೋರಾಗಿವೆ.
ಕುಮಾರಸ್ವಾಮಿ ನೀನು ಹಿಟ್ ಅಂಡ್ ರನ್, ಬ್ಲ್ಯಾಕ್ ಮೇಲರ್. ಬಿಜೆಪಿ ಹೆದರಿಸಲು ಜಿ.ಟಿ ದೇವೇಗೌಡರ ಕೈಯಿಂದ ಒಂದು ಹೇಳಿಕೆ. ಮಗನ ಕೈಯಿಂದ ಮತ್ತೊಂದು ಹೇಳಿಕೆ. ನೀನು ಇನ್ನೊಂದು ಹೇಳಿಕೆ ನೀಡಿದೆ. ಇದೆಲ್ಲ ಯಾಕೆ? ಪಾದಯಾತ್ರೆಗೆ ಬರಲ್ಲ ಅಂದವನು ಈಗ್ಯಾಕೆ ಬಂದೆ? ಅಧಿಕಾರಕ್ಕೋಸ್ಕರ ಎಂದು ಡಿಸಿಎಂ ಡಿ.ಕೆ ಶಿವಕುಮಾರ್(DK Shivakumar) ವಾಗ್ದಾಳಿ ನಡೆಸಿದರು. ನೀವು ರೈತನ ಮಗ ಎಂದು ಹೇಳುತ್ತೀರಿ. ಹುಟ್ಟಿದ ಕರುಗಳೆಲ್ಲ ಬಸವ ಆಗಲ್ಲ. ಉಳುವವನಿಗೆ ಭೂಮಿ ಕೊಟ್ಟಿದ್ದೇವೆ. ಬಗರ್ ಹುಕುಂ ಕೊಟ್ಟಿದ್ದೇವೆ. ನೀವು ಒಂದು ಸಭೆ ಮಾಡಿ ಒಬ್ಬ ರೈತನಿಗೆ ಬಗರ್ ಹುಕುಂ ಜಮೀನು ನೀಡಿಲ್ಲ ಎಂದು ಕಿಡಿ ಕಾರಿದರು.
ಕುಮಾರಣ್ಣ ನಿನ್ನ ಆಸ್ತಿ ಬಗ್ಗೆ ಚರ್ಚೆ ಮಾಡುವ ಮೊದಲು ನಿನ್ನ ಸಹೋದರ ಬಾಲಕೃಷ್ಣಗೌಡ ಅವರ ಕುಟುಂಬ, ಅವರ ತಂದೆ, ಶ್ರೀರಂಗಪಟ್ಟಣದಲ್ಲಿ ಅವರ ಸಂಬಂಧಿಕರ ಬೇನಾಮಿ ಆಸ್ತಿಗಳೆಷ್ಟು? ಒಬ್ಬ ಸರ್ಕಾರಿ ನೌಕರ ಎಷ್ಟು ಸಾವಿರ ಕೋಟಿಗಿದ್ದಾನೆ? ಯಾವ ಈರುಳ್ಳಿ, ಆಲುಗಡ್ಡೆಯಲ್ಲಿ ಸಂಪಾದನೆ ಆಯ್ತು? ರಾಮನಗರದಲ್ಲಿ ಉತ್ತರ ನೀಡಬೇಕು. ನನ್ನ ಕುಟುಂಬದ ಮೇಲೆ ಕೇಸ್ ದಾಖಲಿಸಿ ಏನು ಮಾಡಿದೀರಿ? ನನ್ನ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ ಅದು ಗೊತ್ತಿದೆಯೇ? ನಿನ್ನ ಡಿನೋಟಿಫಿಕೇಷನ್, ಗಣಿ ಪ್ರಕರಣ, ನಿನ್ನ ಕುಟುಂಬದವರ ಆಸ್ತಿ ಪಟ್ಟಿ ಬಿಡುಗಡೆ ಮಾಡಿಲ್ಲ. ಎಲ್ಲ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.