ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಸರ್ಕಾರಿ ಜಾಗ ಒತ್ತುವರಿ(Occupy) ತಡೆಗೆ ಪೊಲೀಸ್ ಬೀಟ್ ಮಾದರಿಯಲ್ಲಿ ಲ್ಯಾಂಡ್ ಬೀಟ್ ವ್ಯವಸ್ಥೆ ಕೈಗೊಂಡು ಒತ್ತುವರಿ, ಅತಿಕ್ರಮಣ ತಡೆಗಟ್ಟಲು ಕ್ರಮ ವಹಿಸುವಂತೆ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ (ಇ-ಆಡಳಿತ) ಸರ್ಕಾರದ ಕಾರ್ಯದರ್ಶಿಗಳಾದ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲ್ ಕುಮಾರ ಘೋಷ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶನಿವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ(Progress review meeting) ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯಲ್ಲಿರುವ ಸರ್ಕಾರಿ ಜಾಗವನ್ನು ಗುರುತಿಸಿಕೊಳ್ಳಬೇಕು. ಒತ್ತುವರಿಯಾಗಬಹುದಾದ ಜಾಗಗಳನ್ನು ಆದ್ಯತೆ ಮೇಲೆ ಪರಿಶೀಲಿಸಿ ಒತ್ತುವರಿಯಾಗದಂತೆ ನಿಗಾ ವಹಿಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಜಾಗದ ಕುರಿತು ಇರುವ ಅನುದಾನವನ್ನು ಬಳಕೆ ಮಾಡಿಕೊಂಡು ಸುತ್ತಲೂ ತಂತಿ ಬೇಲಿ ವ್ಯವಸ್ಥೆ ಸೇರಿದಂತೆ ಸರ್ಕಾರಿ ಜಾಗ ಇರುವ ಕುರಿತು ಫಲಕಗಳನ್ನು ಅಳವಡಿಸುವ ಮೂಲಕ ಒತ್ತುವರಿ ತಡೆಗೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿರುವ ಸರ್ಕಾರಿ ಜಾಗ ಸೇರಿದಂತೆ ಇತರೆ ಸರ್ವೇ ಕಾರ್ಯಕ್ಕಾಗಿ ಈಗಿರುವ ಸಾಧನ ಹಳೆಯದಾಗಿರುವುದರಿಂದ ಪ್ರಸ್ತುತ ಕಾಲೋಚಿತ ಡಿಜಿಪಿಎಸ್(DGPS) ಯಂತ್ರ ಬಳಸಿ ಸರ್ವೇ ಕಾರ್ಯ ಕೈಗೊಳ್ಳುವುದರಿಂದ ಸಮಯಕ್ಕೆ ತಕ್ಕಂತೆ ಕಾರ್ಯದಲ್ಲಿ ವೇಗ ದೊರೆಯಲಿರುವುದರಿಂದ ಡಿಜಿಪಿಎಸ್ ಯಂತ್ರಗಳನ್ನು ಒದಗಿಸುವ ಕುರಿತಂತೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು. ಜಿಲ್ಲೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ನಿಲಯಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ವಹಿಸಬೇಕು.
ಬಾಲಕಿಯರ ವಸತಿ(Hostel) ನಿಲಯಗಳಲ್ಲಿ ಸೂಕ್ತ ಸುರಕ್ಷತಾ ವ್ಯವಸ್ಥೆಗೆ ಪೊಲೀಸ್ ಬೀಟ್ ವ್ಯವಸ್ಥೆ ಕೈಗೊಳ್ಳಬೇಕು. ಹೊರಗಿನ ಯಾವುದೇ ಅನಧಿಕೃತ ವ್ಯಕ್ತಿಗಳು ವಸತಿ ನಿಲಯಗಳಲ್ಲಿ ಪ್ರವೇಶ ನಿರ್ಬಂಧಿಸಬೇಕು. ಸಿಸಿಟಿವಿ ಅಳವಡಿಸಲು ಕ್ರಮ ವಹಿಸಬೇಕು. ವಸತಿ ನಿಲಯದಲ್ಲಿ ಅನಧಿಕೃತವಾಗಿ ಪ್ರವೇಶ ಮಾಡಿದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ವಹಿಸುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವ ನಿಧಿ ಹಾಗೂ ಶಕ್ತಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.