ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ನೆರೆಯ ಕೇರಳದ(Kerala) ವಾಯನಾಡ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಜೊತೆಗೆ ದೇಶದ ವಿವಿಧ ರಾಜ್ಯಗಳಲ್ಲಿ ಭೂಕುಸಿತ, ಭಾರಿ ಮಳೆಯಿಂದಾಗಿ ಪ್ರವಾಹ(Flood) ಸೃಷ್ಟಿಯಾಗಿದೆ. ಇದರಿಂದಾಗಿ ಎಲ್ಲೆಡೆ ಅಪಾರ ಜೀವ ಹಾನಿ, ಆಸ್ತಿ ನಾಶ ಸೇರಿದಂತೆ ಸಾಕಷ್ಟು ಸಂಕಷ್ಟಗಳು ಎದುರಾಗಿವೆ. ಹೀಗಾಗಿ ರಕ್ಷಣಾ ಪಡೆಗಳು ಜೀವದ ಹಂಗು ತೊರೆದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.
ಕೇದಾರನಾಥದಲ್ಲಿ 10,500 ಜನರ ರಕ್ಷಣೆ:
ಉತ್ತರಾಖಂಡದ ಪ್ರಸಿದ್ಧ ಕೇದಾರಾಥ ತೀರ್ಥಕ್ಷೇತ್ರಕ್ಕೆ ಭಕ್ತರು ಕಾಲ್ನಡಿಗೆಯಲ್ಲಿ ಸಾಗುವ ಮಾರ್ಗದಲ್ಲಿ ಭಾರಿ ಮಳೆಯಿಂದಾಗಿ ಬರೋಬ್ಬರಿ 10 ಸಾವಿರದ 500 ಜನರು ಸಿಲುಕಿಕೊಂಡಿದ್ದರು. ಅವರನ್ನು ರಕ್ಷಿಸುವ ಕೆಲಸ ಕಳೆದ ಮೂರು ದಿನಗಳಿಂದ ನಡೆದಿದೆ. ವಾಯುಪಡೆ ಕೆಲವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡುತ್ತಿದೆ. ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್, ಪೊಲೀಸ್ ತಂಡ, ವಾಯು ಪಡೆ ರಕ್ಷಣೆ ಕೆಲಸ ನಡೆದಿದೆ. 17 ಹೆಲಿಕಾಪ್ಟರ್ ಇದಕ್ಕೆ ಬಳಸಿಕೊಳ್ಳಲಾಗಿದೆ. ಭಾರಿ ಮಳೆಯಿಂದಾಗಿ ಮಂದಾಕಿನಿ ನದಿ ಉಕ್ಕಿ ಹರಿಯುತ್ತಿದೆ. ಕೇದಾರನಾಥ, ಭೀಮಬಲಿ, ಗೌರಿಕುಂಡದಲ್ಲಿ ಸಾವಿರಾರು ಜನರು ಸಿಲುಕಿಕೊಂಡಿದ್ದಾರೆ.
ಕೊಲ್ಕತ್ತಾದಲ್ಲಿ ಹಲವು ಜಿಲ್ಲೆಗಳು ಜಲಾವೃತ:
ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದ ಹಲವು ಭಾಗಗಳು ಜಲಾವೃತಗೊಂಡಿವೆ. ವಾಯುಭಾರ ಕುಸಿತದಿಂದಾಗಿ ಶನಿವಾರ ಅಪಾರ ಪ್ರಮಾಣದಲ್ಲಿ ಮಳೆಯಾಗಿದೆ. ಕೊಲ್ಕತ್ತಾ ವಿಮಾನ ನಿಲ್ದಾಣ ಸಹ ಮಳೆ ನೀರಿನಿಂದ ಜಲಾವೃತಗೊಂಡಿದೆ. ಇದುವರೆಗೂ ನಗರದಲ್ಲಿ 7 ಸೆಂಟಿ ಮೀಟರ್ ಮಳೆಯಾಗಿದೆ. ವೀರಭೂಮಿ, ಹೂಗ್ಲಿ, ಪೂರ್ಬ ವರ್ಧಮಾನ್, ಹೌರಾ, ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳು ಮುಂದಿನ 12 ಗಂಟೆಗಳ ಕಾಲ ಮಳೆಯಾಗಲಿದೆಯಂತೆ. ಹಲವು ಜಿಲ್ಲೆಗಳು ಜಲಾವೃತಗೊಂಡಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ.
ಮಧ್ಯಪ್ರದೇಶದಲ್ಲಿ ಇಬ್ಬರು ಮಕ್ಕಳ ಸಾವು, ಐವರಿಗೆ ಗಾಯ:
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗಾಡರ್ ವಾರ್ ತಾಲೂಕಿನ ರಾಂಪೂರ ಗ್ರಾಮದಲ್ಲಿ ಮನೆಯೊಂದು ಕುಸಿದು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಐವರು ಗಾಯಗೊಂಡಿದ್ದಾರೆ. 3 ವರ್ಷದ ಬಾಲಕಿ ಹಾಗೂ 17 ವರ್ಷದ ಬಾಲಕ ಮೃತಪಟ್ಟಿದ್ದಾರೆ. ನರಸಿಂಗಪುರ್ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದೆ.
ಮಂಗಳೂರು, ಹಾಸನದಲ್ಲಿ ಭೂಕುಸಿತ 12 ಟ್ರೇನ್ ರದ್ದು
ಮಂಗಳೂರಿನ ಶಿರಾಡಿ ಘಾಟ್ ನಲ್ಲಿ ಭೂಕುಸಿತವಾಗಿದೆ. ಯಡಕುಮರಿ-ಕಡಗರವಳ್ಳಿ ನಡುವೆ ಇರುವ ರೈಲು ಹಳಿ ಮೇಲೆ ಭೂಕುಸಿತವಾಗಿದೆ. ಹೀಗಾಗಿ ಹೀಗಾಗಿ 12 ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ. ಇನ್ನು ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ದೊಡ್ಡಪಲೆ ಹತ್ತಿರ ಭೂಕುಸಿತವಾಗಿದೆ. ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತಗೊಂಡ 11 ಜನರಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಕೆಲವರು ನಾಪತ್ತೆಯಾಗಿದ್ದಾರಂತೆ.