ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ 2025-26ನೇ ಸಾಲಿನ ಮೊದಲ ತ್ರೈಮಾಸಿಕ ಕೆಡಿಪಿ ಸಭೆ ಶಾಸಕ ಅಶೋಕ ಮನಗೂಳಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳ ಕುರಿತು ವರದಿ ನೀಡಿದರು. ಕೃಷಿ ಇಲಾಖೆಯಿಂದ ರೈತರಿಗೆ ಸರಿಯಾಗಿ ಮಾಹಿತಿ ಹೋಗುತ್ತಿಲ್ಲವೆಂದು ಕೃಷಿ ಸಹಾಯಕ ನಿರ್ದೇಶಕ ಎಚ್.ವೈ ಸಿಂಗೆಗೋಳ ಅವರನ್ನು ಪ್ರಶ್ನಿಸಿದರು. ಬೀಜ, ಗೊಬ್ಬರದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಬೆಳೆ ವಿಮೆ, ಕೃಷಿ ಹೊಂಡ ಸೇರಿದಂತೆ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ರೈತರಿಗೆ ತಲುಪಿಸುವ ಕೆಲಸವಾಗಬೇಕು ಎಂದರು.
ಅಧಿಕಾರಿಗಳು ಮೊಬೈಲ್ ಮೂಲಕ ಮಾಹಿತಿ ನೀಡುವುದನ್ನು ಬಿಡಬೇಕು. ಸಭೆಗೆ ಬರುವಾಗ ನಿಮ್ಮ ಇಲಾಖೆಗೆ ಸಂಬಂಧಿಸಿದ ಮಾಹಿತಿಗಳ ಬಗ್ಗೆ ಪ್ರಿಂಟ್ ತೆಗೆದುಕೊಂಡು ಬರಬೇಕು ಎಂದು ಕಿಡಿ ಕಾರಿದರು. ಸರ್ಕಾರದ ಯೋಜನೆಗಳನ್ನು ಸಮಪರ್ಕವಾಗಿ ಜನರಿಗೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಇನ್ನು ಸಿಂದಗಿ ಮತಕ್ಷೇತ್ರದಲ್ಲಿ ಎಲ್ಲಿ ಜೆಜೆಎಂ ಆಗಿದೆ. ಯಾವ ಜನರು ನೆಮ್ಮದಿಯಿಂದ ಇಲ್ಲ. ಬನ್ನೆಟ್ಟಿ, ಚಿಕ್ಕಸಿಂದಗಿ, ಮನ್ನಾಪುರ, ಗಬಸಾವಳಗಿ ನೀರಿಲ್ಲ. ಡಾಕ್ಯೂಮೆಂಟ್ ಇಲ್ಲದೆ ಇರುವುದು ಇದು ಗೌಂಟಿ ಎಂದು ಪಿಡಬ್ಲುಡಿ ಅಧಿಕಾರಿ ತಾರಾನಾಥ ಅವರನ್ನು ತರಾಟೆಗೆ ತೆಗೆದುಕೊಂಡರು.
ಹೀಗೆ ಹಲವು ಇಲಾಖೆಗಳ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಕ್ಲಾಸ್ ತೆಗೆದುಕೊಂಡರು. ಒಬ್ಬರ ಮೇಲೆ ಒಬ್ಬರು ಹಾಕದೆ ಜನರ ಪರವಾಗಿ ಕೆಲಸ ಮಾಡಿ ಎಂದರು. ಇದೇ ವೇಳೆ ಹಲವು ಪ್ರಮುಖ ನಿರ್ಣಗಳನ್ನು ಈ ವೇಳೆ ತೆಗೆದುಕೊಳ್ಳಲಾಗಿದೆ. ಯಾವೆಲ್ಲ ನಿರ್ಣಗಳನ್ನು ತೆಗೆದುಕೊಳ್ಳಲಾಗಿದೆ ಅನ್ನೋದು ಇಲ್ಲಿದೆ ನೋಡಿ.
ಸಿಂದಗಿ ಹಾಗೂ ಆಲಮೇಲಗೆ ನೂತನ ತಾಲೂಕು ಪಂಚಾಯ್ತಿ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವುದು. ಸಿಂದಗಿ ಪುರಸಭೆಯನ್ನು ನಗರಸಭೆ ಮಾಡುವ ಪ್ರಸ್ತಾವನೆ. ಆಲಮೇಲ ಆರೋಗಕೇಂದ್ರ ಮೇಲ್ದರ್ಜೆಗೆ ಏರಿಸಿ 50 ಹಾಸಿಗೆಯ ಆಸ್ಪತ್ರೆ ಮಾಡುವುದು. ಗ್ರಾಮೀಣ ಠಾಣೆ ನಿರ್ಮಾಣಕ್ಕೆ ಪ್ರಸ್ತಾವನೆ, ಸಿಂದಗಿಯಲ್ಲಿ ವಿದ್ಯುತ್ ಕಾರ್ಯನಿರ್ವಹಾಕ ಅಭಿಯಂತರ ಕಾರ್ಯಾಲಯ ಸ್ಥಾಪನೆ, ಸಿಂದಗಿ, ಆಲಮೇಲ, ದೇವರ ಹಿಪ್ಪರಗಿ ಸೇರಿಕೊಂಡು ಉಪ ವಿಭಾಗಾಧಿಕಾರಿ ಕಚೇರಿ, ಸಿಂದಗಿ ತಾಲೂಕಿನ ವ್ಯಾಪ್ತಿಯಲ್ಲಿ ಮಂಜೂರಾದ 14 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ಬಾಕಿ ಉಳಿದಿರುವ 5 ಕೇಂದ್ರಗಳ ಸ್ಥಾಪನೆ, ಆಲಮೇಲ ತಾಲೂಕಿಗೆ ಹೋಬಳಿ ನೇಮಕ ಸೇರಿದಂತೆ ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಲಾಯಿತು.
ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ತಾಲೂಕು ಪಂಚಾಯ್ತಿ ಇಒ ರಾಮು ಅಗ್ನಿ, ತಹಶೀಲ್ದಾರ್ ಪ್ರದೀಪಕುಮರ ಹಿರೇಮಠ, ಕೆಡಿಪಿ ಜಿಲ್ಲಾ ಸದಸ್ಯರಾದ ಶವಾನಂದ ಕೋಟಾರಗಸ್ತಿ, ನೂರಅಹ್ಮದ ಅತ್ತಾರ ವೇದಿಕೆ ಮೇಲೆ ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.