ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಮುಂಗಾರು ಹಂಗಾಮಿನ ಹಾನಿಗೊಳಗಾದ ತೊಗರಿ ಬೆಳೆಯನ್ನು ಬೇಕಾಬಿಟ್ಟಿ ಸಮೀಕ್ಷೆ ಮಾಡುತ್ತಿರುವುದನ್ನು ವಿರೋಧಿಸಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಕರ್ನಾಟಕ ನವ ನಿರ್ಮಾಣ ಸೇನೆ ಜಂಟಿಯಾಗಿ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಗೆ ಮನವಿ ಸಲ್ಲಿಸಿತು. ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ ಬೆಳೆ ಅತಿಯಾದ ಮಳೆಯಿಂದ ಜಿಲ್ಲೆಯಾದ್ಯಂತ ಶೇಕಡ 90ರಷ್ಟು ಹಾಳಾಗಿದ್ದು, ಹಾಳಾದ ತೊಗರಿ ಬೆಳೆಯನ್ನು ವೀಕ್ಷಣೆ ಮಾಡಿ ಹಾಳಾದ ತೊಗರಿ ಬೆಳೆಯ ಸ್ಥಿತಿಗತಿ ಕುರಿತು ವಿಮಾ ಕಂಪನಿಯವರು ರೈತರ ಜಮೀನುಗಳಿಗೆ ತೆರಳಿ ಸಮೀಕ್ಷೆ ಮಾಡುತ್ತಿದ್ದಾರೆ. ಆದರೆ ಸರಿಯಾದ ರೀತಿಯಲ್ಲಿ ಜಿಪಿಎಸ್ ಮಾಡುತ್ತಿಲ್ಲ ಎಂದರು.
ಮಳೆಯಿಂದ ಹಾನಿಗೊಳಗಾದ ಜಮೀನುಗಳ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ದಾಖಲು ಮಾಡಿಕೊಳ್ಳುತ್ತಿಲ್ಲ. ಕೇವಲ ಶೇಕಡಾವಾರು ದಾಖಲು ಮಾಡಿಕೊಳ್ಳುತ್ತಿದ್ದಾರೆ ಮತ್ತು ರೈತರಿಂದ ಖಾಲಿ ಫಾರ್ಮ್ ನಲ್ಲಿ ಸಹಿ ಪಡೆದುಕೊಳ್ಳುತ್ತಿದ್ದಾರೆ. ಅದನ್ನು ನಂತರ ತಮ್ಮ ಮನಸ್ಸಿಗೆ ಬಂದಂತೆ ಭರ್ತಿ ಮಾಡುತ್ತಾರೆ. ಇದೊಂದು ರೀತಿ ವಿಮಾ ಕಂಪನಿಯವರು ರೈತರ ಕಣ್ಣಿಗೆ ಮಣ್ಣೆರೆಚುವ ಹುನ್ನಾರ ನಡೆಸುತ್ತಿದ್ದಾರೆ. ಆದ್ದರಿಂದ ಈ ಕುರಿತು ಕೃಷಿ ಇಲಾಖೆಯ ಅಧಿಕಾರಿಗಳು ಕೂಡಾ ರೈತರಿಗೆ ಮೋಸವಾಗುವುದನ್ನು ತಡೆಯಲು ಮುಂದಾಗುತ್ತಿಲ್ಲ. ಕಾರಣ ಜಿಲ್ಲಾಡಳಿತವೆ ಖುದ್ದಾಗಿ ಸಮೀಕ್ಷೆ ಮಾಡಿ ಸೂಕ್ತ ವರದಿ ಸರ್ಕಾರಕ್ಕೆ ಸಲ್ಲಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ರಾಜ್ಯಾಧ್ಯಕ್ಷ ಶೇಷರಾವ ಮಾನೆ, ಕೆ.ಕೆ.ಬನ್ನಟ್ಟಿ, ರೈತರಾದ ರಾಮನಗೌಡ ಹಾದಿಮನಿ, ಬಸವರಾಜ ಮಸರಕಲ್ಲ, ಬಸಪ್ಪ ತೋಟದ, ಗುರುರಾಜ ಪಂಚಾಳ, ಡಾ.ಎನ್.ಐ.ಪಾಟೀಲ, ಎಂ.ವಾಲೀಕಾರ, ಎಂ.ಎಂ.ಖಲಾಸಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.