ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಸರ್ವೇ ನಂಬರ್ 842/2 ಜಾಗವನ್ನು ತೆರವುಗೊಳಿಸಿರುವ ಪ್ರಕರಣದಲ್ಲಿ ಮಾಜಿ ಶಾಸಕರಾದ ರಮೇಶ ಭೂಸನೂರ, ಬಿಜೆಪಿಯವರು ಬಂದು ರಾಜಕೀಯ ಮಾಡುತ್ತಿದ್ದಾರೆ ಎಂದು ಶಾಸಕ ಅಶೋಕ ಮನಗೂಳಿ ಅವರ ಹೇಳುತ್ತಿದ್ದಾರೆ. ಯಾವ ವಿಚಾರದಲ್ಲಿ ರಾಜಕೀಯ ಮಾಡಲಾಗಿದೆ. ಬಡವರ ಪರ ಧ್ವನಿ ಎತ್ತಿದ್ದು ರಾಜಕೀಯನಾ ಎಂದು ಬಿಜೆಪಿ ಎಸ್ಟಿ ಮೋರ್ಚಾ ತಾಲೂಕಾಧ್ಯಕ್ಷ ಪ್ರಶಾಂತ ಕದ್ದರಗಿ ಪ್ರಶ್ನಿಸಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಸಂಜೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಈ ರೀತಿ ಹೇಳಿದರು.
ಬೆಂಗಳೂರಿಗೆ ಬಂದಿದ್ದರು, ನಿಮ್ಮನ್ನು ಭೇಟಿಯಾಗಿದ್ದರು. ನಗರಾಭಿವೃದ್ಧಿ ಸಚಿವರ ಹತ್ತಿರ ನೀವು ಇದ್ದರೂ ಅವರನ್ನು ಯಾಕೆ ಭೇಟಿ ಮಾಡಿಸಿ ಪರಿಹಾರ ಕೊಡಲಿಲ್ಲ. ವೈಯಕ್ತಿಕವಾಗಿ 25 ಸಾವಿರ ರೂಪಾಯಿ ಕೊಡ್ತೀನಿ ಎನ್ನುತ್ತೀರಿ. ಅದರಿಂದ ಏನಾಗುತ್ತೆ. ಅಂತರಗಂಗಿ ರಸ್ತೆಯಲ್ಲಿನ ಜಾಗದಲ್ಲಿ ನಿವೇಶನ ಕೊಡುತ್ತೀವಿ ಎನ್ನುತ್ತೀರಿ. ಅಲ್ಲಿ ಏನೂ ಅಭಿವೃದ್ಧಿ ಇಲ್ಲ. ಅಭಿವೃದ್ಧಿಯಾಗಲು ಐದಾರು ತಿಂಗಳು ಬೇಕು. ಮಾಜಿ ಶಾಸಕ ಶರಣಪ್ಪ ಸುಣಗಾರವರ ಹೊಲದ ಹತ್ತಿರ ಜಾಗ ಇದೆ ಅಂತೀರಿ ಅದು ಇನ್ನು ಎನ್ಎ ಆಗಿಲ್ಲ. 13ನೇ ವಾರ್ಡ್ ಜನರನ್ನು ತೆರವುಗೊಳಸಿದೀರಿ. ಅವರಿಗೆ ಯಾವ ರೀತಿ ಪರಿಹಾರ ಕೊಟ್ಟಿದ್ದೀರಿ ಅನ್ನೋದು ಬಹಿರಂಗ ಪಡಿಸಿ. ಧರಣಿ ಕುಳಿತ ಜನರ ಹತ್ತಿರ ಜಿಲ್ಲಾಧಿಕಾರಿ, ಇಬ್ಬರು ಮಂತ್ರಿಗಳು ಇದ್ದರು ಬರುವುದಿಲ್ಲ. ದಲಿತ ನಾಯಕ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಯವರು ಬಂದರೆ ಗೋ ಬ್ಯಾಕ್ ಹೇಳಿದರೂ ಅವರಿಗೆ ಯಾರೂ ವಿರೋಧ ಮಾಡಲ್ಲ. ಸ್ಥಳೀಯ ಆಡಳಿತ ಎಷ್ಟು ವೈಫಲ್ಯವಾಗಿದೆ ಅನ್ನೋದಕ್ಕೆ ಸಾಕ್ಷಿ ಎಂದು ಕಿಡಿ ಕಾರಿದರು.
ಇನ್ನು ರೈತ ಮೋರ್ಚಾ ನಾಯಕ ಪೀರು ಕೆರೂರ ಮಾತನಾಡಿ, 2 ಎಕರೆ ನಾನು ನಮ್ಮ ತಂದೆಯವರ ಹೆಸರಲ್ಲಿ ಬಿಟ್ಟುಕೊಡ್ತೀನಿ. ಪುರಸಭೆಯವರು ಅಭಿವೃದ್ಧಿ ಪಡಿಸಲಿ. ಇನ್ನು ಕಾನೂನುಬದ್ಧವಾಗಿ ಇರೋದು 54 ಫಲಾನುಭವಿಗಳು ಎಂದು ಶಾಸಕರು ಹೇಳಿದ್ದಾರಂತೆ ಎಂದರು. ಪಟ್ಟಣದಲ್ಲಿಯೇ ಎಷ್ಟೊಂದು ಜಾಗಗಳಿವೆ. ಅಲ್ಲಿ ಅವರಿಗೆ ನಿವೇಶನ ಕೊಡುವುದು ಬಿಟ್ಟು, ಯಾರೂ ಇರಲು ಸಾಧ್ಯವಿಲ್ಲದ ಜಾಗದಲ್ಲಿ ಹೋಗಿ ಎಂದರೆ ಹೇಗೆ ಎಂದರು. ಯರಗಲ್ ಹತ್ತಿರ ನಾನು 2 ಎಕರೆ ಜಾಗವನ್ನು ಉಚಿತವಾಗಿ ಕೊಡ್ತೀನಿ. ಸಿಂದಗಿ ಪಟ್ಟಣದ ಕ್ರೀಡಾಂಗಣದ ಹತ್ತಿರ ಸಹ 2 ಎಕರೆಗೂ ಹೆಚ್ಚು ಜಾಗವಿದೆ, 1 ಕೋಟಿ 20 ಲಕ್ಷ ರೂಪಾಯಿಗೆ ಕೊಡುತ್ತೇನೆ ಎಂದರು.
ತಾಲೂಕಿನಲ್ಲಿ ತಳವಾರ ಸಮಾಜದವರು ಹೋದರೆ ಅವರಿಗೆ ಸರಿಯಾದ ಗೌರವ ಕೊಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. ನೀವು ವೋಟ್ ಹಾಕಿಲ್ಲೆಂದು ಹೇಳುತ್ತಾರಂತೆ. ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದರು. ಸುನಿಲ್ ತಳವಾರ ಮಾತನಾಡಿದರು.