ಪ್ರಜಾಸ್ತ್ರ ಸುದ್ದಿ
ಬಾಗಲಕೋಟೆ(Bagalakote): ಕೂಡಲಸಂಗಮದಲ್ಲಿರುವ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಲಾಗಿದೆ. ಇದನ್ನು ಒಡೆದು ತೆಗೆಯಲು ಹೋದ ಆರೋಪದ ಮೇಲೆ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಶಾಸಕ ವಿಜಯಾನಂದ ಕಾಶಪ್ಪನವರ ಸೂಚನೆ ಮೇರೆಗೆ ಬೀಗ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಹೋರಾಟದ ನೇತೃತ್ವ ವಹಿಸಿಕೊಂಡ ರಾಜಕೀಯ ನಾಯಕರ ನಡುವೆ ಬಿರುಕು ಮೂಡಿದ ಪರಿಣಾಮ ಮಾತಿನ ಸಮರ ನಡೆಯುತ್ತಲೇ ಇದೆ. ಈಗ ಪೀಠಕ್ಕೆ ಬೀಗ ಹಾಕಲಾಗಿದೆ.
ನಾಲ್ಕು ದಿನಗಳ ಹಿಂದೆ ಪೀಠಕ್ಕೆ ಬೀಗ ಹಾಕಲಾಗಿದೆ. ಭಾನುವಾರ ತೆಗೆಯಲು ನೋಡಿದ ಜನರ ವಿರುದ್ಧ ಶಾಸಕರ ಬೆಂಬಲಿಗರು ದೂರು ದಾಖಲಿಸಿದ್ದಾರೆ ಎನ್ನಲಾಗುತ್ತಿದೆ. ಪೀಠದ ಟ್ರಸ್ಟ್ ಅಧ್ಯಕ್ಷರಾಗಿರುವ ಶಾಸಕ ವಿಜಯಾನಂದ ಕಾಶಪ್ಪನವರು ಈ ಬಗ್ಗೆ ಮಾತನಾಡಿದ್ದು, ಸ್ವಾಮಿಗಳು ಅದನ್ನು ಟೂರಿಂಗ್ ಟಾಕೀಸ್ ಮಾಡಿಕೊಂಡಿದ್ದರು. ರಾತ್ರಿ ಕುಡುಕರ ಹಾವಳಿ, ಅನೈತಿಕ ತಾಣವಾಗುತ್ತಿತ್ತು. ಹೀಗಾಗಿ ಬೀಗ ಹಾಕಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದ್ದು, ನಾನು ಸಮಾಜ ಸಂಘಟನೆ ಹಾಗೂ ಮೀಸಲಾತಿ ಹೋರಾಟಕ್ಕಾಗಿ ಜಿಲ್ಲೆಗಳ ಪ್ರವಾಸ ಮಾಡುತ್ತಿದ್ದೇನೆ. ಪೀಠದ ಕಡೆ ಹೋಗಿಲ್ಲ. ನಾನಿಲ್ಲದ ಸಂದರ್ಭದಲ್ಲಿ ಏನಾಗಿದೆ ಗೊತ್ತಿಲ್ಲ. ನಾನು ಹೋದ್ಮೇಲೆ ನಿಜ ಸ್ಥಿತಿ ತಿಳಿಯಲಿದೆ ಎಂದಿದ್ದಾರೆ.