ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಕರ್ನಾಟಕ ಗೃಹ ಮಂಡಳಿ ಪ್ರಥಮ ದರ್ಜೆಯ ಸಹಾಯಕ ಎಸ್.ಕೆ ಕೆಂಭಾವಿ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ದಾಳಿ ಮಾಡಿದ್ದಾರೆ. ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಮೇಲೆ ದಾಳಿ ನಡೆಸಿದ್ದು, 15 ಲಕ್ಷ ರೂಪಾಯಿ ನಗದು, ಬೆಳ್ಳಿ, ಬಂಗಾರದ ಆಭರಣಗಳು, ವಾಹನಗಳು, ಆಸ್ತಿ ದಾಖಲಾತಿಗಳು ಪತ್ತೆಯಾಗಿದ್ದು, ಅಂದಾಜು 2 ಕೋಟಿ 34 ಲಕ್ಷ ರೂಪಾಯಿ ಅಕ್ರಮ ಆಸ್ತಿ ಗಳಿಕೆ ಮಾಡಿರುವುದು ಪತ್ತೆಯಾಗಿದೆ ಎಂದು ಲೋಕಾಯುಕ್ತ ಎಸ್ಪಿ ಟಿ.ಮಲ್ಲೇಶ್ ತಿಳಿಸಿದ್ದಾರೆ.
ನ್ಯಾಯಾಲಯದಿಂದ ಅನುಮತಿ ಪಡೆದು ಸುಕುನ ಲೇಔಟ್ ಹಾಗೂ ಪಾರೇಖ ಲೇಔಟ್ ನಲ್ಲಿರುವ ಮನೆಗಳು, ಕರ್ನಾಟಕ ಗೃಹ ಮಂಡಳಿ ಕಚೇರಿ, ತಿಡಗುಂದಿ ಹತ್ತಿರದ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿ ಶೋಧಕಾರ್ಯ ನಡೆಸಲಾಗಿದೆ. ಈ ವೇಳೆ 2 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ದಾಳಿ ವೇಳೆ ಲೋಕಾಯುಕ್ತ ಡಿಎಸ್ ಪಿ ಸುರೇಶ ರೆಡ್ಡಿ ಎಂ.ಎಸ್, ಲೋಕಾಯುಕ್ತ ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಆನಂದ ಟಕ್ಕನ್ನವರ, ಆನಂದ ಡೋಣಿ ಹಾಗೂ ಠಾಣೆ ಸಿಬ್ಬಂದಿ ಭಾಗವಹಿಸಿದ್ದರು ಎಂದು ತಿಳಿಸಲಾಗಿದೆ.