ಪ್ರಜಾಸ್ತ್ರ ಸುದ್ದಿ
ಹಾಸನ(Hasana): ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನಲೆಯಲ್ಲಿ ಗುರುವಾರ ಮುಂಜಾನೆ ಲೋಕಾಯುಕ್ತ ಅಧಿಕಾರಿಗಳು ಮಹಾನಗರ ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತ್ಯನಾರಾಯಣ ಎಂ.ಸಿ ಮನೆ ಮೇಲೆ ದಾಳಿ ನಡೆಸಿದ್ದಾರೆ. ಆದ್ರೆ, ಆತ ಬರೋಬ್ಬರಿ 4 ಗಂಟೆಯ ಬಳಿಕ ಬಾಗಿಲು ತೆಗೆದಿದ್ದಾನೆ. ಬೆಳ್ಳಂಬೆಳಗ್ಗೆ 5.15ರ ಸುಮಾರಿಗೆ ಅಧಿಕಾರಿಗಳು ರಕ್ಷಣಾಪುರಂದಲ್ಲಿರುವ ಮನೆ ಮೇಲೆ ದಾಳಿ ಮಾಡಿದ್ದಾರೆ.
ಅಧಿಕಾರಿಗಳು ಬಂದಿರುವುದು ತಿಳಿದ ಸತ್ಯನಾರಾಯಣ ಮನೆಯ ಲೈಟ್ ಗಳನ್ನು ಆಫ್ ಮಾಡಿ, ಬಾಗಿಲು ತೆರೆಯದೆ ಸತಾಯಿಸಿದ್ದಾನೆ. ಫೋನ್ ಸಹ ಸ್ವಿಚ್ ಆಫ್ ಮಾಡಿದ್ದಾನೆ. ಇದರಿಂದಾಗಿ ಅಧಿಕಾರಿಗಳಿಗೆ ತಲೆನೋವಾಗಿತ್ತು. ಹಾಸನ ನಗರ ಠಾಣೆ ಪೊಲೀಸರು ಸಹ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಬಾಗಿಲು ತೆಗೆಯದಿದ್ದರೆ ಕಾನೂನು ಪ್ರಕಾರ ಬೀಗ ಒಡೆಯಬೇಕಾಗುತ್ತೆ ಅನ್ನೋ ಎಚ್ಚರಿಕೆ ಸಹ ನೀಡಲಾಯಿತು.
ನಂತರ ಸತ್ಯನಾರಾಯಣ ಸಹೋದರಿ ಮನೆಯ ಮುಂದಿನ ಸಿಸಿ ಕ್ಯಾಮೆರಾ ಮುಂದೆ ನಿಂತು ಬಾಗಿಲು ತೆಗೆಯಲು ಮನವಿ ಮಾಡಿದರು. ಅದಾಗಲೇ ನಾಲ್ಕು ಗಂಟೆ ಕಳೆದು ಹೋಗಿತ್ತು. ಬಳಿಕ ಬಾಗಿಲು ತೆಗೆದ. ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇವರ ಮನೆ ಜೊತೆಗೆ ಹೆಂಡ್ತಿ ಹೆಸರಲ್ಲಿರುವ ಯುರೋಕಿಡ್ಸ್ ಶಾಲೆ, ಪಾಂಡಿತ್ಯ ಎಜುಕೇಷನ್ ಸೊಸೈಟಿ ಮೇಲೆ ಸಹ ದಾಳಿ ನಡೆಸಲಾಗಿದೆ.




