ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಇಲ್ಲಿನ ತಾಲೂಕು ಪಂಚಾಯ್ತಿ ಸಭಾ ಭವನದಲ್ಲಿ ಬುಧವಾರ ವಿಜಯಪುರ ಜಿಲ್ಲಾ ಲೋಕಾಯುಕ್ತ ಎಸ್ಪಿ ಟಿ.ಮಲ್ಲೇಶ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಯಾವ ಯಾವ ಇಲಾಖೆಯಲ್ಲಿ ಏನು ಪ್ರಗತಿ ಸಾಧಿಸಲಾಗಿದೆ, ಏನೆಲ್ಲ ಸಮಸ್ಯೆಗಳಿವೆ, ಏನಾದರೂ ಬೇಡಿಕೆಗಳಿವೆ ಎನ್ನುವುದು ಸೇರಿದಂತೆ ಸಾರ್ವಜನಿಕರಿಗೆ ಯಾವ ಇಲಾಖೆಯ ಅಧಿಕಾರಿಗಳಿಂದ ತೊಂದರೆಯಾಗುತ್ತಿದೆ ಎನ್ನುವುದರ ಕುರಿತು ಅಹವಾಲು ಸ್ವೀಕರಿಸುವ ಕೆಲಸ ನಡೆಯಿತು. ಆದರೆ, ಸಭೆಯಲ್ಲಿ ಭಾಗವಹಿಸಿದ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ಒಪ್ಪಿಸಿದರು. ಕೆಲ ಇಲಾಖೆಯ ಅಧಿಕಾರಿಗಳ ಬದಲು ಸಿಬ್ಬಂದಿ ಬಂದಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಯಡ್ರಾಮಿ ಬದಲು ಸಿಬ್ಬಂದಿ ಬಂದಿದ್ದು, ಲೋಕಾಯುಕ್ತ ಎಸ್ಪಿಯವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಡಬಡಾಯಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಭವಾನಿ ಪಾಟೀಲರಿಗೆ ವಸತಿ ಶಾಲೆಯಲ್ಲಿನ ವಿದ್ಯಾರ್ಥಿನಿಯರಿಗೆ ಗುಡ್ ಟಚ್ ಬ್ಯಾಡ್ ಟಚ್ ಬಗ್ಗೆ ಹೇಳಿಕೊಡಲಾಗುತ್ತಿದೆಯಾ ಎನ್ನುವ ಲೋಕಾಯುಕ್ತ ಡಿವೈಎಸ್ಪಿ ಸುರೇಶ ರೆಡ್ಡಿಯವರು ಕೇಳಿದ ಪ್ರಶ್ನೆ ಅರ್ಥವಾಗದೆ ಉತ್ತರಿಸಲು ಕಷ್ಟಪಟ್ಟರು. ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಹಾಗೂ ಸಮಾಜ ಕಲ್ಯಾಣ ಇಲಾಖೆಯವರು ಜೊತೆಗೆ ವಿದ್ಯಾರ್ಥಿನಿಯರಿಗೆ ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ಸಂಬಂಧಪಟ್ಟವರಿಂದ ತಿಳುವಳಿಕೆ ಮೂಡಿಸಿ ಎಂದರು.
ಇನ್ನು ಪುರಸಭೆ ಬಗ್ಗೆ ಹೆಚ್ಚು ದೂರುಗಳು ಬರುತ್ತಿವೆ. ಜಿಲ್ಲೆಯಲ್ಲಿಯೇ ಸಿಂದಗಿ ಪುರಸಭೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ. ಆಡಳಿತಾತ್ಮಕ ಸುಧಾರಣೆ ಸಾಧಿಸಿ ಎಂದು ಮುಖ್ಯಾಧಿಕಾರಿ ಸುರೇಶ ನಾಯಕ ಅವರಿಗೆ ಎಸ್ಪಿ ಟಿ.ಮಲ್ಲೇಶಯವರು ಸೂಚಿಸಿದರು. ಕೃಷಿ ಇಲಾಖೆಯಲ್ಲಿ ಬೆಳೆ ವಿಮೆಗೆ ಸಂಬಂಧಿಸಿದಂತೆ ಬೆಳೆ ಸಾಮಾತ್ಯೆಯಿಲ್ಲದ ಕಾರಣ ವಿಮೆ ಮಂಜೂರು ಮಾಡುತ್ತಿಲ್ಲ ಎನ್ನುವ ಮಾಹಿತಿಗೆ ಇದು ಯಕ್ಷ ಪ್ರಶ್ನೆಯಾಗಿದೆ. ಬೆಳೆ ಬೆಳೆಯುವ ಮೊದಲೇ ಸರ್ವೇ ಆಗುತ್ತಾ, ನಂತರ ಆಗುತ್ತಾ? ಬೆಳೆ ಬೆಳೆದ ಮೇಲೆ ಅದ್ಹೇಗೆ ಬೆಳೆ ಅದಲು ಬದಲು ಆಗುತ್ತೆ. ಇದರ ಮಾಹಿತಿ ಕೊಡಿ ಎಂದು ಕೃಷಿ ಇಲಾಖೆಗೆ ಹೇಳಿದರು. ಬಿಸಿಯೂಟದ ವಿಚಾರದಲ್ಲಿ ತೆಗೆದುಕೊಳ್ಳಬೇಕಾದ ಕ್ರಮದ ಕುರಿತು ತಿಳಿಸಿದರು. ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಸಾಕಷ್ಟು ದೂರುಗಳಿವೆ. ಈ ಬಗ್ಗೆ ಕೇವಲ 2 ಪ್ರಕರಣ ದಾಖಲು ಹೇಗೆ ಸಾಧ್ಯ, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಿ ಎಂದರು. ಆರೋಗ್ಯ ಇಲಾಖೆಯ ಬಗ್ಗೆ ಸಾಕಷ್ಟು ಸಮಸ್ಯೆಗಳಿವೆ. ಮತ್ತೊಮ್ಮೆ ಆಸ್ಪತ್ರೆಗೆ ಪರಿಶೀಲನೆ ಮಾಡುತ್ತೇವೆ ಎಂದು ಟಿಎಚ್ಒ ಡಾ.ಎ.ಎ ಮಾಗಿಯವರಿಗೆ ಹೇಳಿದರು.
ತೋಟಗಾರಿಕೆ, ಅರಣ್ಯ ಇಲಾಖೆ, ಹೆಸ್ಕಾಂ, ಪಿಡಬ್ಲುಡಿ, ಪಿಆರ್ ಡಿ, ಸಾರಿಗೆ ಇಲಾಖೆ, ತಾಲೂಕು ಪಂಚಾಯ್ತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ರೇಷ್ಮೆ, ಕಾರ್ಮಿಕ, ಪಶುಸಂಗೋಪನೆ ಸೇರಿದಂತೆ ಎಲ್ಲ ಇಲಾಖೆಗಳ ಮಾಹಿತಿ ಪಡೆದುಕೊಂಡರು. ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಎಲ್ಲರೂ ಹೇಳಿದರು. ಆದರೆ, ಯಾವ ರೀತಿಯಾಗಿ ಇದುವರೆಗೂ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ ಅಂತಾ ಯಾರೂ ಹೇಳಲಿಲ್ಲ. ಈ ವೇಳೆ ಸಾರ್ವಜನಿಕರಿಂದ ಸುಮಾರು ಏಳೆಂಟು ದೂರುಗಳು ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳಿಂದ ಸ್ಪಷ್ಟನೆ ಕೇಳಿ ಸಮಸ್ಯೆ ಇತ್ಯರ್ಥಕ್ಕೆ ಸೂಚಿಸಿದರು. ನಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಲೋಕಾಯುಕ್ತ ಇಲಾಖೆ ಸಾರ್ವಜನಿಕರ ಸಮಸ್ಯೆ ಆಲಿಸಲು ಏನು ಮಾಡಬಹುದು ಎನ್ನುವದರ ಕುರಿತು ಸಲಹೆ ನೀಡಿದರು. ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ತಾಲೂಕು ಪಂಚಾಯ್ತಿ ಇಒ ರಾಮು ಜಿ.ಅಗ್ನಿ, ಲೋಕಾಯುಕ್ತ ಸಿಪಿಐ ಆನಂದ ಡೋಣಿ ಸೇರಿದಂತೆ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.