ಪ್ರಜಾಸ್ತ್ರ ಸುದ್ದಿ
ಬಳ್ಳಾರಿ(Ballari): ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನಿಂದಾಗಿ ರಾಜ್ಯ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕುರಿತು ತನಿಖೆಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಸಮಿತಿ ರಚಿಸಿದೆ. ಇದರ ನಡುವೆ ಶನಿವಾರ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳ್ಳಾರಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ ಬರೋಬ್ಬರಿ 25ಕ್ಕೂ ಹೆಚ್ಚಿನ ಸಿಬ್ಬಂದಿ ಭೇಟಿ ನೀಡಿದೆ.
ಹೆರಿಗೆ ಕೋಣೆ, ಐಸಿಯು, ಔಷಧಿಗಳ ಕೊಠಡಿ ಸೇರಿದಂತೆ ಎಲ್ಲ ಕಡೆ ಪರಿಶೀಲನೆ ನಡೆಸಲಾಗುತ್ತಿದೆ. ಇದಕ್ಕಾಗಿ ಎರಡು ತಂಡಗಳನ್ನು ಮಾಡಲಾಗಿದೆ. ಹೊಸ ಜಿಲ್ಲೆ ಹೊಸಪೇಟೆಯ ಲೋಕಾಯುಕ್ತ ಸಿಬ್ಬಂದಿ ಸಹ ಇದರಲ್ಲಿ ಭಾಗವಹಿಸಿದ್ದಾರೆ. ಈ ಘಟನೆ ನಿಜಕ್ಕೂ ಆತಂಕ ಮೂಡಿಸಿದ್ದು, ಬಡವರ ಜೀವಗಳಿಗೆ ಬೆಲೆ ಇಲ್ಲವೆಂದು ಜನರು ಸಿಟ್ಟನ್ನು ಹೊರ ಹಾಕುತ್ತಿದ್ದಾರೆ. ವಿಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದಿವೆ.